1 lakh teachers likely to be exempted from TET
1 ಲಕ್ಷ ಶಿಕ್ಷಕರಿಗೆ ಟಿಇಟಿಯಿಂದ ವಿನಾಯ್ತಿ ಸಾಧ್ಯತೆ,
ಸುಪ್ರೀಂ ಕೋರ್ಟ್ ಆದೇಶದಿಂದ ಪಾರು ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ?
ರಾಜ್ಯದ ಸರಿಸುಮಾರು 1 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಡ್ಡಾಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಿಂದ ಒಂದು ಬಾರಿಗೆ ವಿನಾಯ್ತಿ ನೀಡಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಸೆಪ್ಟೆಂಬರ್ 11ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಸುಪ್ರೀಂ ತೀರ್ಪೆನು?
ಟಿಇಟಿ ಪರೀಕ್ಷೆ ಎದುರಿಸದೇ ಸೇವೆಯಲ್ಲಿರುವ ಶಿಕ್ಷಕರು ಮುಂದಿನ 2 ವರ್ಷಗಳಲ್ಲಿ ಟಿಇಟಿ ಉತ್ತಿರ್ಣರಾಗಬೇಕು. ಇಲ್ಲವೇ ಸ್ವಯಂ ನಿವೃತ್ತಿ ಅಥವಾ ಕಡ್ಡಾಯ ನಿವೃತ್ತಿ (ಎಲ್ಲ ಸೌಲಭ್ಯಗಳ ಸಹಿತ) ಹೊಂದಬಹುದು. ಸೇವೆಗೆ 5 ವರ್ಷ ಮಾತ್ರ ಬಾಕಿ ಉಳಿದಿರುವ ಸೇವಾನಿರತರಿಗೆ ಕಡ್ಡಾಯ ಟಿಇಟಿ ಆರ್ಹತೆ ಅನ್ವಯ ಆಗದು.
ತೀರ್ಪಿಂದ ಶಿಕ್ಷಕರಿಗೆ ಆಘಾತ.
ಸುಪ್ರಿಂ ತೀರ್ಪು ಸಹಸ್ರಾರು ಶಿಕ್ಷಕರಿಗೆ ಆಘಾತ ತಂದಿದೆ. ಈಗಾಗಲೇ 25ರಿಂದ 30 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಟಿಇಟಿ ಎದುರಿಸುವಂತೆ ಹೇಳುವುದು ನ್ಯಾಯಯುತವಲ್ಲ. 2011ರ ನಂತರದ ಶಿಕ್ಷಕರಿಗೆ ಇದು ಸಮಂಜಸ. ಇದನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಸರಕಾರದೊಂದಿಗೆ ಚರ್ಚೆ ನಡೆದಿದೆ.
👉 "ಚಂದ್ರಶೇಖರ್ ನೂಗ್ಲಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ"
ಕಳೆದ ವಾರ ಮಹಾರಾಷ್ಟ್ರ ಸರಕಾರ ಹಾಗೂ ಅಂಜುಮನ್ ಇಶಾತ್-ಎ- ತಮಿಲ್ ಟ್ರಸ್ಟ್ ನಡುವಣ ಪ್ರಕರಣದಲ್ಲಿ ಸುಪ್ರಿಂಕೋರ್ಟ್‌ನ ನ್ಯಾಯಮೂರ್ತಿಗಳಾದ ದಿಪಂಕರ್ ದತ್ತಾ ಹಾಗೂ ಮನಮೋಹನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಆದೇಶ ನೀಡಿ, 2009ರ ಶಿಕ್ಷಣದ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2011ರಿಂದ ದೇಶಾದ್ಯಂತ ಜಾರಿಯಾದ ಟಿಇಟಿ ನಿಯಮದಂತೆ ಸೇವಾನಿರತ ಶಿಕ್ಷಕರೆಲ್ಲರೂ (ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹೊರತುಪಡಿಸಿ) ಟಿಇಟಿ ಬರೆಯಬೇಕೆಂದು ತೀರ್ಪಿತ್ತಿದೆ. ಇದರಿಂದ ಕರ್ನಾಟಕ ಸರಿಸುಮಾರು 1 ಲಕ್ಷ ಶಿಕ್ಷಕರಿಗೆ ಟಿಇಟಿ ಎದುರಿಸುವ ಅನಿವಾರ್ಯತೆ ಎದುರಾಗಿದೆ.
ಟಿಇಟಿ ಪರೀಕ್ಷೆಗೆ ಜಿಜ್ಞಾಸೆ:
ರಾಜ್ಯದಲ್ಲಿ ಸದ್ಯ 1 ಲಕ್ಷ 35 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿದ್ದಾರೆ. ಈ ಪೈಕಿ 25 ಸಾವಿರ ಶಿಕ್ಷಕರ ಸೇವೆ 5 ವರ್ಷ ಉಳಿದಿದೆ. ಅಂಥವರು ಟಿಇಟಿ ಬರೆಯುವಂತಿಲ್ಲ. 10 ಸಾವಿರಕ್ಕೂ ಹೆಚ್ಚು ಟಿಇಟಿ ಉತ್ತೀರ್ಣಗೊಂಡ ಶಿಕ್ಷಕರು ಇದ್ದಾರೆ.ಉಳಿದ 1 ಲಕ್ಷ ಶಿಕ್ಷಕರು 2011ಕ್ಕಿಂತ ಮುಂಚೆ ನೇಮಕಗೊಂಡ ಶಿಕ್ಷಕರಿದ್ದಾರೆ. ಅಂದರೆ 2008, 2005, 2001, 1997ರಲ್ಲಿ ನೇಮಕಗೊಂಡ 1 ಲಕ್ಷ ಶಿಕ್ಷಕರಿಗೆ ಈಗ ಟಿಇಟಿ ನಡೆಸುವುದು ಎಷ್ಟು ಸರಿ? ಎಂಬ ಜಿಜ್ಞಾಸೆ ಶಿಕ್ಷಕರನ್ನೂ, ಸರಕಾರವನ್ನೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್ ಆದೇಶದಿಂದ ವಿನಾಯ್ತಿಗಾಗಿ ಶಾಸನ ಜಾರಿಗೊಳಿಸುವ ಒತ್ತಡ ಸರಕಾರದ ಮೇಲಿದೆ.
ಕಾನೂನು ತಜ್ಞರ ಸಲಹೆ:
ಸರಕಾರದ ಉನ್ನತ ಮೂಲಗಳ ಪ್ರಕಾರ, ಕರ್ನಾಟಕ ನಾಗರಿಕ ಸೇವಾ ನಿಯಮಗಳು (ಕೆಸಿಎಸ್‌ಆರ್) 1966 ಹಾಗೂ 1977ರ ಪ್ರಕಾರ ಯಾವುದೇ ಹುದ್ದೆಗೆ ಒಮ್ಮೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು, ತಾತ್ಕಾಲಿಕ ಅವಧಿ ಮುಗಿದ ನಂತರ ಹೊಸ ಮಾನದಂಡಗಳನ್ನು ನೌಕರರ ಮೇಲೆ ಹೇರುವಂತಿಲ್ಲ. ಹೀಗಾಗಿ 2009ರ ಆರ್‌ಟಿಇ ಮತ್ತು 2011ರ ಟಿಇಟಿ ನಿಯಮವನ್ನು ಅದಕ್ಕೂ ಮೊದಲು ನೇಮಕಗೊಂಡ ನೌಕರರಿಗೆ ಹೇರುವುದು ಉಚಿತವಲ್ಲ.
ಆದ್ದರಿಂದ ರಾಜ್ಯದ 1 ಲಕ್ಷ ಶಿಕ್ಷಕರಿಗೆ ಸುಪ್ರಿಂಕೋರ್ಟ್ ಆದೇಶದಿಂದ ವಿನಾಯ್ತಿ ನೀಡಿ, ವಿಶೇಷ ನೇಮಕಾತಿ ಅಧಿನಿಯಮ ಸೇರ್ಪಡೆಗೆ ಶಾಸನ ತರುವಂತೆ ಕಾನೂನು ಇಲಾಖೆ ಸರಕಾರಕ್ಕೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ. ಸರಕಾರ ಕಾನೂನು ತಜ್ಞರ ಸಲಹೆಯನ್ನು ಬರುವ ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.