Tuesday, October 7, 2025

ESSAY -37: ಮನಸ್ಸು ಅಪಾಯಕಾರಿಯೇ?

  ISARESOURCEINFO       Tuesday, October 7, 2025
ESSAY -37:  ಮನಸ್ಸು ಅಪಾಯಕಾರಿಯೇ?



ಈ ಬಾರಿ 'ಮನಸ್ಸು- ಸುಂದರ ಸೇವಕನೋ? ಅಥವಾ ಅಪಾಯಕಾರಿ ಯಜಮಾನನೊ?' ಎಂಬ ವಿಷಯದ ಮೇಲೆ ಪ್ರಬಂಧ ನೀಡಲಾಗಿದೆ.

ಜಗತ್ತು ಪಡೆದಿರುವ ಎಲ್ಲಾ ಜ್ಞಾನವು ಬಮನಸ್ಸಿನಿಂದ ಬಂದಿದೆ, ವಿಶ್ವದ ಅನಂತ ಗ್ರಂಥಾಲಯವು ನಮ್ಮ ಮನಸ್ಸಿನಲ್ಲಿದೆ ಎಂಬ ಸ್ವಾಮಿ ವಿವೇಕಾನಂದರ ಮಾತು ಮನಸ್ಸಿನ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಮಾನವ ಮನಸ್ಸು ಸಂಕೀರ್ಣ, ಶಕ್ತಿಯುತ ಸಾಧನವಾಗಿದ್ದು, ಸೃಜನಶೀಲತೆ, ನಾವೀನ್ಯತೆ ಮತ್ತು ಸಮಸ್ಯೆ ಪರಿಹರಿಸುವಿಕೆಯ ಅದ್ಭುತ ಶಕ್ತಿ ಹೊಂದಿದೆ. ಇದು ನಮ್ಮ ಪ್ರಜ್ಞೆಯ ಮೂಲಸ್ಥಾನವಾಗಿದ್ದು, ನಾವು ಗ್ರಹಿಸಲು, ಯೋಚಿಸಲು ಮತ್ತು ಆಯ್ಕೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಆದರೂ, ಯಾವುದೇ ಸಾಧನದಂತೆ, 'ಮನಸ್ಸು ಸುಂದರ ಸೇವಕ; ಮತ್ತು ನಿಯಂತ್ರಿಸದಿದ್ದರೆ ಅಪಾಯಕಾರಿ ಯಜಮಾನ' ಎರಡೂ ಆಗಬಹುದು.

ವಿವರಣೆ: 

▪️ಮನಸ್ಸು ಮನೆಯಲ್ಲಿನ ಬೆಂಕಿಯಂತಿದೆ: 

ಅದನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಆಧಾರದ ಮೇಲೆ ಅದು ಮನೆಯನ್ನು ಬೆಳಗಬಹುದು ಅಥವಾ ಸುಟ್ಟುಹಾಕಬಹುದು. ಸ್ವಾಮಿ ವಿವೇಕಾನಂದರು "ಮನಸ್ಸು ನಿಮ್ಮ ಸೇವಕನಲ್ಲ, ಆದರೆ ಅದನ್ನು ಸೇವಕನಂತೆ ಕೆಲಸ ಮಾಡಲು ತರಬೇತಿ ನೀಡಬಹುದು'' ಎಂದು ಹೇಳಿದ್ದಾರೆ. ಶಿಸ್ತುಬದ್ಧ ಚಿಂತನೆ ಮತ್ತು ಇಚ್ಛಾಶಕ್ತಿಯನ್ನು ಬಳಸಿದ್ದರಿಂದಲೇ ಮಹಾತ್ಮ ಗಾಂಧಿ ಭಾರತವನ್ನು ಸ್ವಾತಂತ್ರ್ಯದತ್ತ ಕೊಂಡೊಯ್ಯಲು ಸಾಧ್ಯವಾಯಿತು. ಇನ್ನೊಂದೆಡೆ, ಅನಿಯಂತ್ರಿತ ಮನಸ್ಸು ಸ್ವಯಂ ವಿನಾಶಕ್ಕೆ ಕಾರಣವಾಗಬಹುದು. ಇದಕ್ಕೆ ಮಹಾಭಾರತದ ದುರ್ಯೋಧನ, ಜರ್ಮನಿಯ ಹಿಟ್ಲರ್, ಇಟಲಿಯ ಮುಸೊಲಿನಿ ಸೂಕ್ತ ಉದಾಹರಣೆಗಳಾಗಿದ್ದಾರೆ. ಮಹಾಭಾರತದ ಕರ್ಣ ತನ್ನ ಶೌರ್ಯ ಮತ್ತು ಔದಾರ್ಯದ ಹೊರತಾಗಿಯೂ, ತನ್ನ ಆಂತರಿಕ ಸಂಘರ್ಷ ಮತ್ತು ಕೋಪವನ್ನು ಜಯಿಸಲು ಅಸಮರ್ಥನಾಗಿದ್ದುದು ಅವನ ಅವನತಿಗೆ ಕಾರಣವಾಯಿತು.

ಭಗವದ್ಗೀತೆಯು ಮನಸ್ಸನ್ನು ನಿಯಂತ್ರಿಸುವ ಮಹತ್ವವನ್ನು ಒತ್ತಿಹೇಳುತ್ತದೆ. ಶ್ಲೋಕವೊಂದರಲ್ಲಿ, ಶ್ರೀಕೃಷ್ಣ ಪರಮಾತ್ಮನು ''ಉದ್ಧರೇದ್ ಆತ್ಮನಾತ್ಮನಂ, ನ ಆತ್ಮನಂ ಅವಸದಯೇತ್'' ಎನ್ನುತ್ತಾನೆ. ಅಂದರೆ, ನಿಮ್ಮ ಮನಸ್ಸಿನ ಮೂಲಕ ನಿಮ್ಮನ್ನು ಮೇಲಕ್ಕೆತ್ತಿ. ಅದೇ ಮನಸ್ಸಿನ ಮೂಲಕ ನಿಮ್ಮನ್ನು ನೀವು ಕೆಳಮಟ್ಟಕ್ಕೆ ಇಳಿಸಬೇಡಿ. ಏಕೆಂದರೆ ಮನಸ್ಸು ಸ್ನೇಹಿತನೂ ಹೌದು ಮತ್ತು ನಿಮ್ಮ ಶತ್ರುವೂ ಹೌದು. ಈ ಶ್ಲೋಕವು ಮನಸ್ಸಿನ ದ್ವಂದ್ವ ಪಾತ್ರವನ್ನು ಮತ್ತು ಸ್ವಯಂ ನಿಯಂತ್ರಣದ ಅಗತ್ಯವನ್ನು ಒತ್ತಿಹೇಳುತ್ತದೆ.

'ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ; ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ; ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ; ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ' ಎಂಬ ನಮ್ಮ ಅಲ್ಲಮ ಪ್ರಭುಗಳ ವಚನವು ಮನಸ್ಸು ಹೇಗೆ ನಮಗೆ ನೋವುಗಳನ್ನು ತಂದೊಡ್ಡುತ್ತದೆ ಎಂಬುದನ್ನು ಬಹಳ ಸೂಚ್ಯವಾಗಿ ವಿವರಿಸುತ್ತದೆ.

ನಮ್ಮ ಸಾಧನೆ, ನಮ್ಮ ವಿಫಲತೆ; ನಮ್ಮ ಪ್ರಗತಿ, ನಮ್ಮ ಅಧೋಗತಿ ನಮ್ಮ ಮನಸ್ಸು ಏನನ್ನು ಯೋಚಿಸುತ್ತದೆ, ಹೇಗೆ ಕೆಲಸ ಮಾಡುತ್ತದೆ ಎಂಬುದರ ಫಲಿತಾಂಶಗಳೇ ಆಗಿವೆ. ನಮ್ಮ ಮನಸ್ಸಿನ ಮೇಲೆ ನಮಗೆ ಅಧಿಕಾರವಿದೆಯೇ ಹೊರತು ಹೊರಗಿನ ಘಟನೆಗಳ ಮೇಲೆ ಅಲ್ಲ. ಆದರೆ, ನಮ್ಮ ವಿಫಲತೆ, ನಮ್ಮ ದುಸ್ಥಿತಿಗಳಿಗೆ ನಾವು ಇತರರನ್ನು ದೂಷಿಸುವುದು ವಿಪರ್ಯಾಸವೇ ಆಗಿದೆ.

▪️ಯಾವಾಗ ಮನಸ್ಸು ಸುಂದರ ಸೇವಕನಾಗುತ್ತದೆ?

ಮನಸ್ಸನ್ನು ನಮ್ಮ ಸುಂದರ ಸೇವಕನನ್ನಾಗಿಸಿಕೊಳ್ಳಲು ಈ ಕೆಳಗಿನ ಅಂಶಗಳು ಪೂರಕವಾಗಿವೆ.

1. ಸೃಜನಶೀಲತೆ, ನಾವೀನ್ಯತೆ: 

ಶಿಸ್ತಿಗೆ ಒಳಪಟ್ಟ ಮನಸ್ಸು ಅದ್ಭುತ ಆವಿಷ್ಕಾರ ಮತ್ತು ಸೃಷ್ಟಿಗಳಿಗೆ ಕಾರಣವಾಗಿದೆ. ಐನ್ ಸ್ಟೀನ್‌ನ ಸಾಪೇಕ್ಷತಾ ಸಿದ್ಧಾಂತದಿಂದ ಲಿಯೊನಾರ್ಡೊ ಡಾವಿನ್ಸಿಯ ಕಲೆಯವರೆಗೆ, ಸಿಂಧೂ ನದಿ ನಾಗರಿಕತೆಯಿಂದ ಚಂದ್ರಯಾನ, ಮಂಗಳಯಾನದವರೆಗೆ; ಮಾನವ ಮನಸ್ಸು ಸರಿಯಾಗಿ ಕೆಲಸ ಮಾಡಿದಾಗ ಅನಂತ ಸಾಧನೆಗಳನ್ನು ಅನಾವರಣಗೊಳಿಸಬಹುದು ಎಂಬುದನ್ನು ತೋರಿಸುತ್ತವೆ.

2. ಭಾವನಾತ್ಮಕ ಬುದ್ಧಿವಂತಿಕೆ: 

ಕ್ರಮಬದ್ಧ ಮನಸ್ಸುಳ್ಳವರು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅದು ನಮ್ಮಲ್ಲಿ ಸಹಾನುಭೂತಿ ಮತ್ತು ಸ್ಥಿತಿಸ್ಥಾಪಕ ಗುಣವನ್ನು ಬೆಳೆಸುತ್ತದೆ. ಬಲವಾದ ಸಂಬಂಧಗಳನ್ನು ನಿರ್ಮಿಸಲು ಮತ್ತು ಬುದ್ದಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅಗತ್ಯ.

3. ಆಧ್ಯಾತ್ಮಿಕ ಮನೋಭಾವ: 

ಧ್ಯಾನ, ಯೋಗ ಮತ್ತು ಪ್ರಾರ್ಥನೆಯಂತಹ ಅಭ್ಯಾಸಗಳು ಮನಸ್ಸಿನ ಶಕ್ತಿಯನ್ನು ಆಂತರಿಕ ಶಾಂತಿ ಮತ್ತು ಜ್ಞಾನೋದಯದ ಕಡೆಗೆ ಸಾಗುವಂತೆ ಮಾಡುತ್ತವೆ.

▪️ಯಾವಾಗ ಮನಸ್ಸು ಅಪಾಯಕಾರಿ ಯಜಮಾನನಾಗುತ್ತದೆ?

ಈ ಕೆಳಗಿನ ಕೆಲವು ಕಾರಣಗಳು, ಸನ್ನಿವೇಶಗಳು ಮನಸ್ಸನ್ನು ಅಪಾಯಕಾರಿ ಯಜಮಾನನನ್ನಾಗಿಸುತ್ತವೆ.

1. ಒತ್ತಡ ಮತ್ತು ಆತಂಕ:

ಅನಿಯಂತ್ರಿತ ಮನಸ್ಸು ನಕಾರಾತ್ಮಕ ಭಾವನೆಗಳ ಸಂತಾನೋತ್ಪತ್ತಿಯ ಸ್ಥಳ ಒತ್ತಡ, ಭಯ ಹಾಗೂ ಆತಂಕಗಳು ಹೆಚ್ಚಾಗಿ ಅನಿಯಂತ್ರಿತ ಆಲೋಚನೆಗಳಿಂದ ಉದ್ಭವಿಸುತ್ತವೆ. ಚಿಂತೆ ಚಿತೆಯಂತೆ ಎಂಬ ನಾಣ್ಣುಡಿ ಹೇಳುವಂತೆ, ಅತಿಯಾದ ಆಲೋಚನೆಯು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ತಿಪ್ಪೆ ಗುಂಡಿಯಲ್ಲಿ ರೋಗಾಣುಗಳು ಹುಟ್ಟುವಂತೆ, ಆತಂಕ, ಒತ್ತಡಕ್ಕೊಳಗಾದ ಮನಸ್ಸು ದುರಾಲೋಚನೆಗಳನ್ನು ಹುಟ್ಟುಹಾಕುತ್ತದೆ.

2. ವ್ಯಸನ ಮತ್ತು ಪ್ರಲೋಭನೆಗಳು: 

ಶಿಸ್ತು ಇಲ್ಲದ ಮನಸ್ಸು ಸುಲಭವಾಗಿ ಹಾನಿಕಾರಕ ಅಭ್ಯಾಸಗಳು ಮತ್ತು ವ್ಯಸನಗಳಿಗೆ ಬಲಿಯಾಗುತ್ತದೆ. ಸಾಕಷ್ಟು ಬುದ್ದಿವಂತಿಕೆ, ಶ್ರೀಮಂತಿಕೆ, ಶಕ್ತಿಯ ಹೊರತಾಗಿಯೂ, ತನ್ನ ಅನಿಯಂತ್ರಿತ ಆಸೆಗಳಿಗೆ ಬಲಿಯಾದ -ರಾವಣನ ಕಥೆಯು ನಮಗೆ ಎಚ್ಚರಿಕೆಯ ಗಂಟೆಯಾಗಿದೆ.

3. ಸಂಘರ್ಷ ಮತ್ತು ಹಿಂಸೆ: 

ಅನಿಯಂತ್ರಿತ ಮನಸ್ಸುಗಳು ಯುದ್ಧ ಮತ್ತು ದೌರ್ಜನ್ಯಗಳಿಗೆ ಹೇಗೆ ಕಾರಣವಾಗಿವೆ ಎಂಬುದರ ಉದಾಹರಣೆಗಳಿಂದ ಇತಿಹಾಸವು ತುಂಬಿದೆ. ಅಡಾಲ್ಫ್ ಹಿಟ್ಲರ್‌ನಂತಹ ಸರ್ವಾಧಿಕಾರಿಗಳ ದ್ವೇಷ ಮತ್ತು ಮಹತ್ವಾಕಾಂಕ್ಷೆ ವ್ಯಾಪಕ ದುಃಖಕ್ಕೆ ಕಾರಣವಾಯಿತು. 

▪️ಮನಸ್ಸನ್ನು ಪಳಗಿಸಲು ಕೆಲವು ಮಾರ್ಗಗಳು:

1. ಧ್ಯಾನ: 

ನಿಯಮಿತ ಧ್ಯಾನವು ಮನಸ್ಸನ್ನು ಶಾಂತಗೊಳಿಸಲು ಮತ್ತು ಸ್ಪಷ್ಟತೆಯನ್ನು ತರಲು ಸಹಾಯ ಮಾಡುತ್ತದೆ. ವಿಪಸ್ಸನದಂತಹ ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ ಎಂಬುದು ಸಾಬೀತಾಗಿದೆ.

2. ಶಿಕ್ಷಣ ಮತ್ತು ಅರಿವು:

 ಅರಿವುಳ್ಳ ಮನಸ್ಸು ಅಪಕ್ವ ಆಲೋಚನೆಗಳಿಂದ ಪ್ರಭಾವಿತವಾಗುವ ಸಾಧ್ಯತೆ ಕಡಿಮೆ. ಶಿಕ್ಷಣವು ವಿಮರ್ಶಾತ್ಮಕ ಚಿಂತನೆ ಮತ್ತು ವೈಚಾರಿಕತೆಯನ್ನು ಬೆಳೆಸುತ್ತದೆ.

3. ಶಿಸ್ತುಬದ್ಧ ದಿನಚರಿ: 

ರಚನಾತ್ಮಕ ದಿನಚರಿಯನ್ನು ಅನುಸರಿಸುವುದರಿಂದ ಮನಸ್ಸಿನಲ್ಲಿ ಶಿಸ್ತು ತುಂಬುತ್ತದೆ.

4. ಕೃತಜ್ಞತೆ ಮತ್ತು ಸಕಾರಾತ್ಮಕತೆ: 

ಜೀವನದ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಲು ಮನಸ್ಸನ್ನು ತರಬೇತಿಗೊಳಿಸುವುದರಿಂದ ನಮ್ಮ ದೃಷ್ಟಿಕೋನವನ್ನು ಪರಿವರ್ತಿಸಬಹುದು. ಕೃತಜ್ಞತಾ ಮನೋಭಾವವು ನಮ್ಮ ಅಸ್ತಿತ್ವಕ್ಕೆ, ನಮ್ಮ ಸುಂದರ ಬದುಕಿಗೆ ಕಾರಣವಾದ ಈ ಪರಿಸರ, ಈ ಸಮಾಜದೆಡೆಗೆ ಒಳ್ಳೆಯ ಭಾವವನ್ನು ಉಂಟುಮಾಡುತ್ತದೆ. ಇದು ದ್ವೇಷ-ಅಸೂಯೆಗಳನ್ನು ತಡೆಯುತ್ತದೆ.

5. ಆಧುನಿಕ ವಿಜ್ಞಾನದ ಪಾತ್ರ: 

ಆಧುನಿಕ ನರವಿಜ್ಞಾನವು ಮನಸ್ಸನ್ನು ಸ್ಥಿರವಾದ ಪ್ರಯತ್ನದ ಮೂಲಕ ಮರುರೂಪಿಸಬಹುದು ಎಂದು ಹೇಳುತ್ತದೆ.

ಉಪಸಂಹಾರ: 

ಇತರರನ್ನು ನಿಯಂತ್ರಿಸುವುದು ಶಕ್ತಿ: ನಿಮ್ಮನ್ನು ನಿಯಂತ್ರಿಸುವುದು ನಿಜವಾದ ಶಕ್ತಿ ಎಂಬ ಲಾವೊ ತ್ಸುಮಾತಿನಂತೆ, ಮನಸ್ಸು ನಿಯಂತ್ರಿಸಲ್ಪಟ್ಟಾಗ, ನಮ್ಮ ಶ್ರೇಷ್ಠ ಮಿತ್ರನಾಗಬಹುದು; ನಮ್ಮನ್ನು ಯಶಸ್ಸು, ಶಾಂತಿಯೆಡೆಗೆ ಕರೆದೊಯ್ಯಬಹುದು. ಇದಕ್ಕೆ ವಿರುದ್ಧವಾಗಿ, ನಿಯಂತ್ರಿಸದಿದ್ದರೆ, ಅದು ನಿರಂಕುಶಾಧಿಕಾರಿಯಾ ಗಬಹುದು, ನಮ್ಮನ್ನು ತನ್ನ ಗುಲಾಮನನ್ನಾಗಿಸಿಕೊಳ್ಳಬಹುದು.

ಶ್ರೀ ಐ.ಜಿ. ಚೌಗಲಾ, ಲೇಖಕರು: ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರು
logoblog

Thanks for reading ESSAY -37: ಮನಸ್ಸು ಅಪಾಯಕಾರಿಯೇ?

Previous
« Prev Post