KGID : ಕಡ್ಡಾಯ ಜೀವ ವಿಮಾ ನಿಯಮ 8 ರಂತೆ ಕನಿಷ್ಠ ಮಾಸಿಕ ವಿಮಾಕಂತಿನ ಪಾಲನೆ, ಪರಿಶೀಲನೆ ಮತ್ತು ಕ್ರಮಕೈಗೊಳ್ಳುವ ಬಗ್ಗೆ ಸುತ್ತೋಲೆ ಪ್ರಕಟ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ಮೇರೆಗೆ ಪ್ರತೀ ಸರ್ಕಾರಿ ನೌಕರರು ಹೊಂದಿರುವ ಹುದ್ದೆಗಳಿಗೆ ಗೊತ್ತುಪಡಿಸಲಾದ ವೇತನಶ್ರೇಣಿಯನ್ವಯ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ನಿಯಮ 8 ರಲ್ಲಿ ಅಗತ್ಯ ತಿದ್ದುಪಡಿ ಮಾಡಿರುವಂತೆ, ಪ್ರತಿಯೊಬ್ಬ ಅರ್ಹ ಸರ್ಕಾರಿ ನೌಕರರು ಅವರು ಹೊಂದಿರುವ ಹುದ್ದೆಗಳ ವೇತನ ಶ್ರೇಣಿಯ ಸರಾಸರಿ ವೇತನದ 6.25% ರಷ್ಟು ಕನಿಷ್ಠ ಮಾಸಿಕ ವಿಮೆಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.
ಆದರೆ, ಇತ್ತೀಚೆಗೆ ನಡೆದ ಪರಿಶೀಲನೆಯಂತೆ, ಸುಮಾರು 82,256 ನೌಕರರು ಕನಿಷ್ಠ ಮಾಸಿಕ ವಿಮಾಕಂತನ್ನು ಹೊಂದಿಲ್ಲದಿರುವುದು ಗಮನಕ್ಕೆ ಬಂದಿರುತ್ತದೆ.
ಕಡ್ಡಾಯ ಜೀವ ವಿಮಾ ನಿಯಮವನ್ನು ಸಮರ್ಪಕವಾಗಿ ನಿರ್ವಹಿಸಲು, ಇಲಾಖೆಯ ಎಲ್ಲಾ ಉಪ ನಿರ್ದೇಶಕರುಗಳು ಹಾಗೂ ಜಿಲ್ಲಾ ವಿಮಾಧಿಕಾರಿಗಳು ಕ್ರಮ ಕೈಗೊಂಡು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವೇತನ ಬಟವಾಡೆ ಅಧಿಕಾರಿಗಳೊಂದಿಗೆ ಹಾಗೂ ಖಜಾನೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅವರವರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಮಾಸಿಕ ವಿಮಾಕಂತನ್ನು ಆಗಿಂದಾಗ್ಗೆ ಪರಿಶೀಲಿಸಿ ಕನಿಷ್ಠ ದರಕ್ಕಿಂತ ಕಡಿಮೆ ದರದಲ್ಲಿ ವಿಮೆ ಮಾಡಿಸಿದ್ದಲ್ಲಿ ಅವರ ವೇತನ ಶ್ರೇಣಿಗೆ ನಿಗದಿಪಡಿಸಲಾದಂತೆ ಕಡಿಮೆ ವಿಮೆ ಮಾಡಿಸಿದಲ್ಲಿ, ಕನಿಷ್ಠ ಮಾಸಿಕ ಮೊಬಲಗಿಗೆ ಅನುಸಾರವಾಗಿ ಉಂಟಾಗುವ ವ್ಯತ್ಯಾಸದ ಮೊತ್ತಕ್ಕಾಗಿ ಹೆಚ್ಚಿನ ವಿಮೆ ಮಾಡಿಸುವಂತೆ ಅವರುಗಳಿಂದ ಕಡ್ಡಾಯವಾಗಿ ಪ್ರಸ್ತಾವನೆಯನ್ನು ಪಡೆದು ನಿಯಮಾನುಸಾರ ಕಾರ್ಯಗತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮುಂದುವರೆದು, ಕನಿಷ್ಟ ವಿಮಾ ಕಂತನ್ನು ಹೊಂದಿಲ್ಲದ ನೌಕರರ ಜಿಲ್ಲಾವಾರು / ಇಲಾಖಾವಾರು ಮಾಹಿತಿಯನ್ನು ಪಟ್ಟಿಮಾಡಿ ತಮ್ಮ ಮಾಹಿತಿಗಾಗಿ ಹಾಗೂ ಮುಂದಿನ ಕ್ರಮಕ್ಕಾಗಿ ಲಗತ್ತಿಸಲಾಗಿದೆ. ಸದರಿ ಪಟ್ಟಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ಡಿ.ಡಿ.ಓ. ಗಳಿಗೆ ಈ ಕುರಿತು ತಕ್ಷಣವೇ ಕ್ರಮಕೈಗೊಳ್ಳಲು ಸೂಚಿಸುವಂತೆ ತಿಳಿಸಲಾಗಿದೆ.