ಪಿಯು ದಾಖಲಾತಿಗೆ ರೋಸ್ಟರ್ ನಿಯಮವನ್ನು ಅನುಷ್ಠಾನಕ್ಕೆ ತರಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಸರಕಾರಿ ಕೋಟಾ ಮತ್ತು ಮ್ಯಾನೇಜ್ ಮೆಂಟ್ ಕೋಟಾ ಅನುಪಾತ, ವರ್ಗವಾರು ಮೀಸಲು ಅನುಸಾರವೇ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು ಎಂದು ಇಲಾಖೆ ಆದೇಶಿಸಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಸಮಾನತೆ ಮತ್ತು ನ್ಯಾಯ ಒದಗಿಸುವ ಉದ್ದೇಶದಿಂದ ಕಡ್ಡಾಯಗೊಳಿಸಲಾಗುತ್ತಿರುವ ಈ ರೋಸ್ಟರ್ ನಿಯಮದ ಕುರಿತ ಮಾಹಿತಿ ಇಲ್ಲಿದೆ.
ಶಿಕ್ಷಣ ಕ್ಷೇತ್ರದಲ್ಲಿ ರೋಸ್ಟರ್ ನಿಯಮವು ಸಮಾಜದ ವಿವಿಧ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಒಂದು ಪ್ರಮುಖ ವ್ಯವಸ್ಥೆ. ಇದು ವಿಶೇಷವಾಗಿ ಶಿಕ್ಷಕರ ನೇಮಕಾತಿ ಮತ್ತು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಅನ್ವಯವಾಗುತ್ತದೆ. ಈ ನಿಯಮದ ಪ್ರಕಾರ, ಮೀಸಲಾತಿ ವರ್ಗಗಳ ಪ್ರತಿನಿಧಿತ್ವವನ್ನು ಖಾತರಿಪಡಿಸಲು ಕ್ರಮ ಸಂಖ್ಯೆಗಳನ್ನು ಆಧರಿಸಿ ರೋಸ್ಟರ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ.
ನಿಯಮ:
ಭಾರತದಲ್ಲಿ, ಸಂವಿಧಾನದ 16(4)ನೇ ವಿಧಿ ಮತ್ತು 335ನೇ ವಿಧಿಯು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಸೇರಿದಂತೆ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗಗಳಲ್ಲಿ ಸ್ಥಾನಗಳನ್ನು ಕಾಯ್ದಿರಿಸಲು ರಾಜ್ಯಕ್ಕೆ ಅನುವು ಮಾಡಿಕೊಡುತ್ತದೆ. ರೋಸ್ಟರ್ ನೀತಿಯು ಈ ಮೀಸಲಾತಿಗಳನ್ನು ಕಾರ್ಯಗತಗೊಳಿಸಲು ಬಳಸುವ ಒಂದು ವ್ಯವಸ್ಥೆಯಾಗಿದ್ದು, ವಿವಿಧ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಗಳಲ್ಲಿ ಈ ಗುಂಪುಗಳ ಅನುಪಾತದ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ.
ಮೀಸಲಾತಿ:
ರೋಸ್ಟರ್ ನಿಯಮದ ಅನ್ವಯ ಪ್ರತಿವರ್ಷ ಸರಕಾರವು ನಿಗದಿಪಡಿಸಿದ ಆದಾಯ ಮಿತಿಯೊಳಗೆ ಇರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮೀಸಲಾತಿಗಳನ್ನು ಒದಗಿಸುತ್ತದೆ. ರಕ್ಷಣಾ ಸಿಬ್ಬಂದಿ ಮಕ್ಕಳು, ಗ್ರಾಮೀಣ ಮೀಸಲಾತಿ, ವಿಶೇಷಚೇತನ ಮೀಸಲು, ಕನ್ನಡ ಮಾಧ್ಯಮ ಮೀಸಲು ಹೀಗೆ ಅನೇಕ ವಿಭಾಗಗಳಲ್ಲಿ ಈ ವರ್ಗಗಳಿಗೆ ನಿರ್ದಿಷ್ಟ ಶೇಕಡಾವಾರು ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ. ಪ್ರತಿ ವರ್ಗದೊಳಗಿನ ಆಯ್ಕೆಯು ವಿದ್ಯಾರ್ಥಿಗಳ ಅರ್ಹತಾ ಪರೀಕ್ಷೆ ಎಸ್‌ಎಸ್ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಡೆಯುತ್ತದೆ.
ಉದ್ದೇಶ:
ಸಮಾಜದ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶ ನೀಡುತ್ತದೆ. ಸಾಮಾಜಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಶೈಕ್ಷಣಿಕ ಅವಕಾಶಗಳನ್ನು ಎಲ್ಲಾ ವರ್ಗಗಳಿಗೆ ವಿಸ್ತರಿಸಲು ಈ ನಿಯಮ ನೆರವಾಗುತ್ತದೆ. ಇದರಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುವುದಲ್ಲದೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಯೋಜಿತ ಕಲಿಕೆಗೆ ಅನುಕೂಲ ಕಲ್ಪಿಸುತ್ತದೆ. ಸಮರ್ಪಕ ರೋಸ್ಟರ್ ನೀತಿಯಿಂದ ಶೈಕ್ಷಣಿಕ ಗುಣಮಟ್ಟ ಸುಧಾರಿಸುತ್ತದೆ.
ರಾಜ್ಯದಲ್ಲಿ ಪಿಯು ಪ್ರವೇಶಕ್ಕೆ ನಿಯಮ:
ಸರಕಾರಿ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ವರ್ಗವಾರು ಮೀಸಲು, ವಿಶೇಷ ಚೇತನರು, ಮಾಜಿ ಸೈನಿಕರ ಮಕ್ಕಳಿಗೆ ವಿಶೇಷ ಆದ್ಯತೆ ಅನುಸಾರವೇ ಪ್ರವೇಶ ನೀಡಬೇಕು. ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಈ ಮೀಸಲಿನ ಜತೆಗೆ ರೋಸ್ಟರ್ ನಿಯಮ ಪಾಲಿಸಬೇಕು. ಅನುದಾನಿತ ಕಾಲೇಜುಗಳಲ್ಲಿ ಶೇ.64 ಸರಕಾರಿ ಹಾಗೂ ಶೇ.16ರಷ್ಟು ಮ್ಯಾನೇಜ್ ಮೆಂಟ್, ಖಾಸಗಿ ಕಾಲೇಜುಗಳಲ್ಲಿ ತಲಾ ಶೇ.50ರಷ್ಟು ಸರಕಾರಿ ಮತ್ತು ಮ್ಯಾನೇಜ್‌ಮೆಂಟ್ ಸೀಟುಗಳನ್ನು ಮೀಸಲಿರಿಸಲಾಗಿದೆ. ನಿಗದಿಗಿಂತ ಹೆಚ್ಚಿನ ಅರ್ಜಿಗಳು ಬಂದರೆ ಅಂಕಗಳನ್ನು ಮಾನದಂಡವಾಗಿ ಪರಿಗಣಿಸ ಲಾಗುತ್ತದೆ. ಪ್ರಸಕ್ತ ವರ್ಷದಿಂದ ರೋಸ್ಟರ್ ಪದ್ಧತಿಯ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘನೆಯಾದರೆ ಪ್ರವೇಶಾತಿ ಅನುಮೋದನೆ ಆಗುವುದಿಲ್ಲ ಎಂದು ಸರಕಾರ ಎಚ್ಚರಿಕೆ ನೀಡಿದೆ.
No comments:
Post a Comment