Vachana literature: ಘಟ್ಟಿವಾಳಯ್ಯನ ವಚನಗಳು-01

  ISARESOURCEINFO      
Vachana literature: ಘಟ್ಟಿವಾಳಯ್ಯನ ವಚನಗಳು-01



ಕವಿ ಪರಿಚಯ: (1160) ಹನ್ನೆರಡನೆ ಶತಮಾನದ ವಚನಕಾರ. ಮುದ್ದಣ್ಣ ಎಂಬುದು ಇವನ ಪೂರ್ವನಾಮ.

ಶಿವಾನುಭವವನ್ನು ನರ್ತನದ ಮೂಲಕ ಸಾರುವ ಕಾಯಕವನ್ನು ಮಾಡುತ್ತಿದ್ದು ಕಪಟಿಗಳು ಇವನ ಸದಾಚಾರದ ಪ್ರಭಾವದಿಂದ ನಿಜ ಜಂಗಮರಾದದ್ದು ಇವನ ವೈಶಿಷ್ಟ್ಯ. ಒಮ್ಮೆ ಬಸವಣ್ಣನವರ ಮಹಾಮನೆಗೆ ಊಟಕ್ಕೆ ಹೋಗುತ್ತಿದ್ದ ಜಂಗಮರನ್ನು ಕಂಡು ಘಟ್ಟಿವಾಳಯ್ಯನು 'ಬಸವಣ್ಣನ ಮನೆಯ ಮುಸುರೆ ಗಡಿಗೆಗೆ ಇವರೇ ಮಕ್ಷಿಕಗಳು' ಎನ್ನಲು ಅವರು ಕೋಪದಿಂದ ಇವನ ಇಷ್ಟಲಿಂಗವನ್ನು ಕಿತ್ತುಕೊಂಡರು. ಆತನು ಅದನ್ನು ಕೊಡುವಂತೆ ಬೇಡಲು ಅವರು ಕುಹಕದಿಂದ ತಮ್ಮ ಮುಂದಿದ್ದ ಕಲ್ಲುಗುಂಡೊಂದನ್ನು ತೋರಿ ಅದೋ ಅಲ್ಲಿದೆ ನಿನ್ನ ಇಷ್ಟಲಿಂಗ ಎಂದು ಹಾಸ್ಯ ಮಾಡಿದರು. ಆತನು ಅದನ್ನೇ ಇಷ್ಟಲಿಂಗವೆಂದು ಕೊರಳಲ್ಲಿ ಕಟ್ಟಿಕೊಂಡು ಬಸವಣ್ಣನ ಮಹಾಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಬಿಟ್ಟನು. ಸುದ್ದಿ ತಿಳಿದ ಬಸವಣ್ಣನು ಪ್ರಭುದೇವ, ಚನ್ನಬಸವಣ್ಣ ಮೊದಲಾದವರೊಂದಿಗೆ ಅಲ್ಲಿಗೆ ಬಂದು ಆ ಜಂಗಮರಿಗೆ ಆತನ ಇಷ್ಟಲಿಂಗವನ್ನು ನೀಡುವಂತೆ ಹೇಳಿದನು. ಆಗ ಅವರು 'ಘಟ್ಟಿವಾಳಯ್ಯಗಳೇ ನಿಮಗೆ ಗುರುಕೊಟ್ಟ ಲಿಂಗ ಮತ್ತು ಬೆಟ್ಟದ ಈ ಗುಂಡು ಹೀಗೆ ಎರಡು ಲಿಂಗಗಳೇ? ನಿಮಗೆ ಇಬ್ಬರು ಗಂಡರೇ?' ಎಂದು ವ್ಯಂಗ್ಯವಾಡಿದರು. ಆಗ ಘಟ್ಟಿವಾಳಯ್ಯ ಇಷ್ಟಲಿಂಗದೊಳೆಗೆ ಕಲ್ಲುಗುಂಡನ್ನು ಸೇರಿಸಿಕೊಳ್ಳುತ್ತಾನೆ. ಇದನ್ನು ಕಂಡ ಅಲ್ಲಮ ಮೊದಲಾದವರು ಘಟ್ಟಿವಾಳಯ್ಯನದು ನಿಜವಾದ ನಡೆಯೆಂದು ಆತನನ್ನು ಸ್ತುತಿಸಿದರು. ಅಲ್ಲಮ, ಬಸವ, ಸಿದ್ದರಾಮ, ಆದಯ್ಯ ಮೊದಲಾದ ಶರಣರು ಘಟ್ಟಿವಾಳಯ್ಯನ ಗಟ್ಟಿತನವನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ. ಸಿದ್ಧರಾಮನು "ಧೀರನಾದಡೆ ಘಟ್ಟಿವಾಳಯ್ಯನಂತಾಗಬೇಕಯ್ಯ" ಎಂದಿದ್ದಾನೆ.

ಬಸವಣ್ಣನವರು "ಕಾಯಕವಂಚಕನಲ್ಲ, ಜೀವ ವಂಚಕನಲ್ಲ, ನಿರಂತರ ಅಸಹಜ ನೋಡಯ್ಯಾ ಶಂಕೆಯಿಲ್ಲದ ಮಹಾಮಹಿಮನು ಕೂಡಲ ಸಂಗನ ಶರಣನುಪಮಾತೀತ ನೋಡಯ್ಯಾ"ಎಂದು ಹೊಗಳಿದರೆ. "ಆಶನಕ್ಕಂಜಿ ವೇಷವನೆ ಹೊತ್ತು ದೇಶವ ತೊಳಲುವ ಹಿರಿಯರ ಗಂಡ, ಕಾಲದಗಂಡ, ಕರ್ಮದಗಂಡ, ಲಿಂಗವಿಡಿದು ಸಾವ ಹಿರಿಯರ ಗಂಡ, ಗುಹೇಶ್ವರ" ಎಂದು ಅಲ್ಲಮ ಹೊಗಳಿದ್ದಾನೆ. ಇಂತಹ ಘಟ್ಟಿವಾಳಯ್ಯ ನರ್ತನ ಮಾಡುತ್ತಿರುವಾಗಲೇ ಲಿಂಗೈಕ್ಯನಾದ.

ಸಾರಾಂಶ : ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದೇ? ಅಂತೆಯೇ ಉಗ್ರಸರ್ಪದ ಹಲ್ಲಿನೊಳಗೆ ಅಮೃತದ ರುಚಿ ಇರುತ್ತದೆಯೇ? ಹೊಟ್ಟೆ ಪಾಡಿಗೋಸ್ಕರ ಜಂಗಮರ ವೇಷ ಧರಿಸಿದವರೆಲ್ಲ ಶಿವನನ್ನು ಹೇಗೆ ಅರಿಯುವರು ಎಂದು ಪ್ರಶ್ನಿಸುತ್ತಾನೆ. ಇಂತಹ ವೇಷಧಾರಿಗಳು ಶಿವಶರಣರ ಗುಂಪಿನಿಂದ ಬೇರೆ. ಅಂತಹವರಿಗೆ ಶಿವ ದೊರೆಯುವುದಾದರೂ ಹೇಗೆ ಎಂದು ಹೇಳುತ್ತಾರೆ.

ಅಂತೆಯೇ ಧ್ಯಾನ ತಪಸ್ಸು, ಉಪವಾಸ, ವ್ರತ ಎಂಬವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ನಿರ್ಬಂಧಗಳೆಲ್ಲ ನಗೆಗೆ ಕಾರಣವಾಗಿ. ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲಿ ಇಲ್ಲದವನಾಗುತ್ತಾನೆ. ಧ್ಯಾನ ತಪಸ್ಸುಗಳೆಲ್ಲ ಮನಸ್ಸಿಟ್ಟು ಆಚರಿಸಬೇಕೇ ಹೊರತು ಬಲವಂತದಿಂದಲ್ಲ ಎಂದು ಹೇಳುತ್ತಾನೆ.

ತನ್ನ ದೇಹದ ಮೇಲಿನ ಮೋಹವನ್ನು ಬಿಡಬೇಕೆಂದು ಗುರುವನ್ನು ತೋರಿಸಲಾಗಿದೆ. ಮನಸ್ಸನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಲಿಂಗವನ್ನು ತೋರಿ, ಧನದ ಮೇಲಿನ ಆಸೆಯನ್ನು ತೊರೆಯಬೇಕೆಂದು (ಹಣವನ್ನು ದಾನಮಾಡಲಿ ಎಂದು) ಜಂಗಮವನ್ನು ತೋರಿಸಿದರು. ಒಳ್ಳೆಯದನ್ನೆಲ್ಲ ಮರೆತು ಹೊಡೆದಾಡುವ ಭಾಷೆ ಹೀನರು (ಮಾತಿಗೆ ತಪ್ಪಿದವರನ್ನು) ಕಂಡು ನಾಚಿಕೆಯಾಯಿತು.

ಗುರು, ಲಿಂಗ, ಜಂಗಮವನ್ನು ಮರೆತು ಸುಖ ಭೋಗಗಳಿಗೆ ಹೊಡೆದಾಡುವ ಜನರನ್ನು ಕಂಡು ನಾಚುವ ಘಟ್ಟಿವಾಳಯ್ಯನು ಡಾಂಬಿಕ ಭಕ್ತರ ನಡವಳಿಕೆಗಳನ್ನು ಖಂಡಿಸುತ್ತಾನೆ. ಇಂತಹವರು ಶಿವಭಕ್ತರಾಗಲು, ಶಿವನನ್ನು ಕಾಣಲು ಸಾಧ್ಯವಿಲ್ಲ, ಎಂಬುದು ಈತನ ಅಭಿಮತ. 

ಸಂದರ್ಭದೊಡನೆ ವಿವರಿಸಿರಿ :

1. ವೇಷಧಾರಿಗಳೆಲ್ಲ ನಿಮ್ಮಕೂಟಕ್ಕೆ ಹೊರಗು.

ಆಯ್ಕೆ : ಈ ವಚನದ ಸಾಲನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ಡಾಂಭಿಕ ಭಕ್ತರನ್ನು ಕುರಿತು ವಿವರಿಸುವ ಸಂದರ್ಭ ಇದಾಗಿದೆ.

ವಿವರಣೆ: ಹೊಟ್ಟೆಪಾಡಿಗೋಸ್ಕರವಾಗಿ ಜಂಗಮರ, ಶಿವಶರಣರ ವೇಷವನ್ನು ಧರಿಸುವ ಜನರನ್ನು ಕಂಡು ಅವರ ರೀತಿ ನೀತಿಗಳನ್ನು ಖಂಡಿಸುತ್ತಾ ಈ ಮಾತನ್ನು ಹೇಳುತ್ತಾನೆ. ಶಿವಶರಣರ ಗುಂಪಿನಲ್ಲಿ ಇವರು ಸೇರಲು ಅರ್ಹರಲ್ಲವೆನ್ನುವುದು ವಚನಕಾರನ ಅಭಿಮತ. ಹೀಗೆ ಹೇಳುವಾಗ ಈ ಮೇಲಿನ ಮಾತು ಬಂದಿದೆ.

2. ಶೀಲವೆಂಬುದು ಸೂತಕ.

ಆಯ್ಕೆ: ಈ ವಚನದ ಸಾಲನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ನಡೆತೆಯ ಕುರಿತು ಹೇಳುವ ಸಂದರ್ಭ ಇದಾಗಿದೆ.

ವಿವರಣೆ: ಧ್ಯಾನತಪಸ್ಸು, ಉಪವಾಸ, ವ್ರತ ಎಂಬವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ನಿರ್ಬಂಧಗಳೆಲ್ಲ ನಗೆಗೆ ಕಾರಣವಾಗಿ, ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲಿ ಇಲ್ಲದವನಾಗುತ್ತಾನೆ ಎಂಬುದು ಘಟ್ಟಿವಾಳಯ್ಯನ ಅಭಿಮತ.

3. ಭಾಷೆಹೀನರ ಕಂಡು ನಾಚಿಕೆಯಾಯಿತ್ತು.

ಆಯ್ಕೆ :

ಈ ಮಾತನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ಕಷ್ಟಕ್ಕೆ ಕಡಿದಾಡುವ ಭಾಷೆಹೀನರನ್ನು ಗಮನಿಸಿ ಹೇಳುವ ಮಾತಿದು.

ವಿವರಣೆ : ತನು-ಮನ-ಧನವನ್ನು ಮರೆಯಲೆಂದು ಗುರು, ಲಿಂಗ, ಜಂಗಮರನ್ನು ತೋರಿದ್ದರೂ ಒಳ್ಳೆಯದನ್ನು ಮರೆತು ಹೊಟ್ಟೆಯಪಾಡಿಗಾಗಿ ಮಾತಿಗೆ ತಪ್ಪಿ ಓಡಾಡುವ ಜನರನ್ನು ಕಂಡು ನಾಚಿಕೆಯಾಯಿತು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.

ಒಂದು ವಾಕ್ಯದಲ್ಲಿ ಉತ್ತರಿಸಿ:

1. ದಯೆ ಧರ್ಮದ ಮೊನೆ ಯಾವುದಕ್ಕೆ ಇರುವುದಿಲ್ಲ?

ಇರಿವ ಆಯುಧಕ್ಕೆ ದಯೆ ಧರ್ಮದ ಮೊನೆ ಇರುವುದಿಲ್ಲ.

2. ತಪವನ್ನು ಘಟ್ಟಿವಾಳಯ್ಯ ಏನೆಂದು ಕರೆಯುತ್ತಾನೆ?

ತಪವನ್ನು ಘಟ್ಟಿವಾಳಯ್ಯ ಬಂಧನವೆಂದು ಕರೆಯುತ್ತಾನೆ.

3. ನಗೆಗೆ ಈಡಾಗುವುದು ಯಾವುದು?

ಕಟ್ಟಿನ ವ್ರತದ ಭಾಷೆಯು ನಗೆಗೆ ಈಡಾಗುವುದು.

4. ಭಾಷೆ ಹೀನರ ಕಂಡಾಗ ಏನಾಯಿತು?

ಭಾಷೆ ಹೀನರ ಕಂಡಾಗ ನಾಚಿಕೆಯಾಯಿತು.

▪️ಘಟ್ಟಿವಾಳಯ್ಯನ ವಚನಗಳ ಅಂಕಿತ ಯಾವುದು?

ಘಟ್ಟಿವಾಳಯ್ಯನ ವಚನಗಳ ಅಂಕಿತ ಚಿಕ್ಕಯ್ಯಪ್ರಿಯ ಸಿದ್ಧಲಿಂಗ.

ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :

1. ಕೈದು. ಕಾಳೋರಗಗಳಿಗೆ ಏನೇನು ಇರುವುದಿಲ್ಲ?

ಇರಿವ ಕೈದು ಅಥವಾ ಆಯುಧಕ್ಕೆ ದಯೆ ಧರ್ಮದ ಮೊನೆ ಇರುವುದಿಲ್ಲ. ಕಾಳೋರಗಗಳಿಗೆ ಅವುಗಳ ಕೋರೆ ಹಲ್ಲಿನಲ್ಲಿ ಅಮೃತದ ಸುಧೆ ಇರುವುದಿಲ್ಲ.

2. ತಗಹು, ಸೂತಕಗಳು ಯಾವುವು ?

ಘಟ್ಟಿವಾಳಯ್ಯನ ಪ್ರಕಾರ ನೇಮವೆಂಬುದು ತಗಹು. ಶೀಲ ಅಥವಾ ಒಳ್ಳೆಯ ನಡತೆ ಎನ್ನುವುದು ಕೂಡಾ ಸೂತಕವಾಗಿದೆ.

3. ತನು ಮನ ಧನಗಳನ್ನು ಮರೆಯಲು ಏನನ್ನು ತೋರುತ್ತಾರೆ?

ತನುವನ್ನು ಮರೆಯಲು ಗುರುವನ್ನು, ಮನವನ್ನು ಮರೆಯಲು ಲಿಂಗವನ್ನು ಹಾಗೂ ಧನವನ್ನು ಮರೆಯಲು ಜಂಗಮವನ್ನು ತೋರುತ್ತಾರೆ.

ಐದಾರು ವಾಕ್ಯದಲ್ಲಿ ಉತ್ತರಿಸಿ:

1. ಘಟ್ಟಿವಾಳಯ್ಯ ವೇಷದಾರಿಗಳನ್ನು ಕೂಟದಿಂದ ಹೊರಗು ಎನ್ನಲು ಕಾರಣಗಳೇನು?

ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದಿಲ್ಲ. ಉಗ್ರಸರ್ಪದ ಹಲ್ಲಿನೊಳಗೆ ವಿಷವಿರುವುದೇ ಹೊರತು ಅಮೃತವಿರಲು ಸಾಧ್ಯವಿಲ್ಲ. ಅಂತೆಯೇ ವೇಷಧಾರಿ ಭಕ್ತರು ಹೊಟ್ಟೆಪಾಡಿಗೋಸ್ಕರ ಜಂಗಮರ ವೇಷಧರಿಸಿದವರೆಲ್ಲ ಶಿವನನ್ನು ಹೇಗೆ ಅರಿಯಲು ಸಾಧ್ಯ ಎಂಬುದು ಈತನ ಪ್ರಶ್ನೆ. ಇಂತಹ ವೇಷಧಾರಿಗಳು ಶಿವಶರಣರ ಗುಂಪಿನಿಂದ ಬೇರೆ ಅಂತಹವರಿಗೆ ಶಿವ ದೊರೆಯುವುದಾದರೂ ಹೇಗೆ ಎಂದು ಹೇಳುತ್ತಾ ಇವರಿಗೆ ಚಿಕ್ಕಯ್ಯಪ್ರಿಯಸಿದ್ದಲಿಂಗ ಒಲಿಯುವುದಿಲ್ಲ ಎನ್ನುತ್ತಾನೆ.

2. ವ್ರತಗಳನ್ನು ಕುರಿತಂತೆ ಘಟ್ಟಿವಾಳಯ್ಯನ ನಿಲುವೇನು?

ಧ್ಯಾನ, ತಪಸ್ಸು, ಉಪವಾಸ, ವ್ರತ ಎಂಬುವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ಕಟ್ಟುಪಾಡುಗಳೆಲ್ಲ ನಗೆಗೆ ಕಾರಣವಾಗಿ, ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲೇ ಇಲ್ಲದವನಾಗುತ್ತಾನೆ. ಧ್ಯಾನ-ತಪಸ್ಸುಗಳೆಲ್ಲ ಮನಸ್ಸಿಟ್ಟು ಆಚರಿಸಬೇಕೇ ಹೊರತು ಬಲವಂತದಿಂದಲ್ಲ ಎಂದು ಹೇಳುತ್ತಾನೆ. ಈತ ಇಷ್ಟಲಿಂಗಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟವನು.

3.ಘಟ್ಟಿವಾಳಯ್ಯನ ವಚನಗಳ ಆಶಯಗಳೇನು?

ಹೊಟ್ಟೆಯ ಪಾಡಿಗೋಸ್ಕರ ಜಂಗಮರಂತೆ, ಶಿವಶರಣರಂತೆ ವೇಷಧರಿಸಿದ ಜನರನ್ನು, ಮನಸ್ಸಿಲ್ಲದೆಯೇ ನೇಮ, ಧ್ಯಾನ, ತಪಸ್ಸು, ವ್ರತ, ಉಪವಾಸಗಳೇ ಮೊದಲಾದ. ಅನೇಕ ರೀತಿಯ ಕಟ್ಟುಪಾಡುಗಳನ್ನು ಹೊಂದಿದ್ದು ನಗೆಗೆ ಕಾರಣವಾಗುವ ಜನರನ್ನು ಖಂಡಿಸುತ್ತಾ ಡಾಂಭಿಕತನದಿಂದ, ಬಲವಂತದಿಂದ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹವರು ಶಿವಭಕ್ತರ ಗುಂಪಿನಿಂದಲೂ ಹೊರಗೆ ಎಂದಿದ್ದಾನೆ. ತನು ಮನ ಧನಗಳನ್ನು ಮರೆಯಲೆಂದು ಗುರು, ಲಿಂಗ, ಜಂಗಮರನ್ನು ತೋರಲಾಗಿದೆ. ಗುರು-ಲಿಂಗ-ಜಂಗಮಗಳನ್ನು ಮರೆವ ಭಾಷಾಹೀನರನ್ನು ಕಂಡು ನಾಚುತ್ತೇನೆ ಎಂದು ಘಟ್ಟಿವಾಳಯ್ಯ ಹೇಳುತ್ತಾನೆ.
logoblog

Thanks for reading Vachana literature: ಘಟ್ಟಿವಾಳಯ್ಯನ ವಚನಗಳು-01

No comments:

Post a Comment