ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಈಗ ತುಂಬ ಸುಲಭವಾಗಿದೆ. ಎಲ್ಲ ಪ್ರಕ್ರಿಯೆಗಳು ಕೂಡ ಆನ್‌ಲೈನ್‌ನಲ್ಲೇ ಮುಗಿಯುತ್ತವೆ. ಹಾಗಾಗಿ, ರಿಟರ್ನ್ ಸಲ್ಲಿಸಿದ ಬಳಿಕ ಎಲ್ಲ ದಾಖಲೆಗಳು ಸರಿಯಾಗಿದ್ದರೆ ಕೆಲವೇ ನಿಮಿಷಗಳಲ್ಲಿ ರಿಫಂಡ್ ಆಗುತ್ತದೆ. ಹೀಗಿದ್ದರೂ, ಕೆಲವೊಮ್ಮೆ ಆದಾಯ ತೆರಿಗೆ ರಿಫಂಡ್ ವಿಳಂಬವಾಗುತ್ತದೆ. ಹಾಗಾದರೆ, ರಿಫಂಡ್ ವಿಳಂಬವಾಗಲು ಕಾರಣಗಳೇನು? ರಿಫಂಡ್ ಸಲ್ಲಿಸಿದ ಬಳಿಕ ಏನೆಲ್ಲ ಮಾಡಬೇಕು? ಮುಂದೆ ಓದಿ.
ಚಾರ್ಟರ್ಡ್ ಅಕೌಂಟೆಂಟ್ ಲೆಕ್ಕಪುಸ್ತಕಗಳ ಆಡಿಟ್‌ಗಳು ಇಲ್ಲದವರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ಈಗಾಗಲೇ ಮುಗಿದಿದೆ. ದಾಖಲೆ ಪ್ರಮಾಣದಲ್ಲಿ ರಿಟರ್ನ್ ಸಲ್ಲಿಕೆಯಾಗಿರುವುದು ಆರೋಗ್ಯಕರವಾದ ಆರ್ಥಿಕ ವ್ಯವಸ್ಥೆಯನ್ನು ಸೂಚಿಸುತ್ತದೆ.
ನಿಮ್ಮ ಆದಾಯವು ತೆರಿಗೆ ವ್ಯಾಪ್ತಿಯಲ್ಲಿ ಇದ್ದರೆ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಹಿಡಿದು ಅಥವಾ ಮುಂಗಡವಾಗಿಯೇ?' ತೆರಿಗೆಯನ್ನು ಸರಕಾರದ ಖಾತೆಗೆ ಪಾವತಿಸಬೇಕು, ಆದಾಯ ಮತ್ತು ಅದರ ತೆರಿಗೆಯನ್ನು ಅಕ್ಕಹಾಕಿ ಬಾಕಿ ತೆರಿಗೆ ಪಾವತಿಸಬೇಕಾಗಿ ಬಂದಲ್ಲಿ ಅದನ್ನು ಪಾವತಿಸಿದ ನಂತರವೇ ರಿಟರ್ನ್ಸ್ ಸಲ್ಲಿಸಬೇಕು. ಎನ್ನುವುದು ನಿಯತು. ಕೆಲವು ಸನ್ನಿವೇಶಗಳಲ್ಲಿ ತೆರಿಗೆಯನ್ನು ಹೆಚ್ಚಾಗಿ ಪಾವತಿಸಿದ್ದರೆ ರಿಟರ್ನ್ಸ್ ಸಲ್ಲಿಸಿದ ಬಳಿಕ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ರಿಫಂಡ್ (ತೆರಿಗೆ ಮರುಪಾವತಿ) ಪಡೆಯಬಹುದು.
ಇತ್ತೀಚಿನ ವರ್ಷಗಳಲ್ಲಿ ರಿಟರ್ನ್ ಸಲ್ಲಿಸುವುದು ತಂತಜ್ಞಾನದ ಅಳವಡಿಕೆಯಿಂದ ಆನ್ಲೈನ್ ಆಗಿರುವುದರಿಂದ ಸುಲಭವಾಗಿದೆ.
ತೆರಿಗೆ ಇಲಾಖೆಯಿಂದ ರಿಟರ್ನ್ಗಳು ವೇಗವಾಗಿ ಸಂಸ್ಕರಣೆಗೊಂಡು ತೆರಿಗೆ ರಿಫಂಡ್ (ತೆರಿಗೆ ಮರುಪಾವತಿ) ಹಲವು ಸಂದರ್ಭಗಳಲ್ಲಿ ಕೆಲವೇ ನಿಮಿಷಗಳಲ್ಲಿ ತೆರಿಗೆದಾರರ ಬ್ಯಾಂಕ್ ಖಾತೆಗೆ ಜಮಾ ಆಗಿರುವ ನಿದರ್ಶನಗಳಿವೆ. ಹೀಗಿದ್ದರೂ ಕೆಲವೊಮ್ಮೆ ತೆರಿಗೆ ರಿಫಂಡ್ ವಿಳಂಬವಾಗುವುದನ್ನು ಕೇಳಿದ್ದೇವೆ. ಇದಕ್ಕೆ ಹಲವು ಕಾರಣಗಳಿವೆ.
1. ಪರಿಶೀಲನೆ (Verification) ಮರೆಯುವುದು:
ಹಿಂದಲ್ಲ ಪುಟಗಟ್ಟಲೇ ರಿಟರ್ನ್ ಸಲ್ಲಿಸುತ್ತಿದ್ದ ಕಾಲದಲ್ಲಿ ರಿಟರ್ನ್ ಬರೆದು ಕಡೆಯಲ್ಲಿ ರಿಟರ್ನ್(Verification) ಪರಿಶೀಲನೆ ಮಾಡಲು ತೆರಿಗೆದಾರರು ಸಹಿ ಮಾಡಿ,ರಿಟರ್ನ್ ದೃಢಿಕರಿಸಿ ಆದಾಯ ತೆರಿಗೆ ಕಚೇರಿಗೆ ಸಲ್ಲಿಸುತ್ತಿದ್ದರು.
ಆದ್ರೆ ಬದಲಾದ ಸನ್ನಿವೇಶದಲ್ಲಿ ಆನ್ಲೈನ್ ಮೂಲಕ ರಿಟರ್ನ್ ಸಲ್ಲಿಸುವ ಇಂದಿನ ಪರಿಸ್ಥಿತಿಯಲ್ಲಿ ಪರಿಶೀಲನೆಯು ಣುಕ ಮೂಲಕ ಆಗುತ್ತದೆ. ಈಗಿರುವ ನಿಯಮಾವಳಿಗಳ ಪ್ರಕಾರ ಆನ್ ಲೈನ್ ಮೂಲಕ ರಿಟರ್ನ್ ಸಲ್ಲಿಸಿದ 30 ದಿನಗಳೊಳಗೆ ಪರಿಶೀಲಿಸ ಬೇಕು. ಇಲ್ಲದಿದ್ದರೆ ಅಂತಹ ರಿಟರ್ನ್‌ಗಳನ್ನು ತೆರಿಗೆ ಇಲಾಖೆ ಸಂಸ್ಕರಿಸುವುದಿಲ್ಲ. ತೆರಿಗೆದಾರರು ರಿಟರ್ನ್ ಸಲ್ಲಿಸಿದ ಬಳಿಕ ಪರಿಶೀಲಿಸುವುದನ್ನು ನಿರ್ಲಕ್ಷಿಸುವುದರಿಂದ ಮರುಪಾವತಿಯು ಬ್ಯಾಂಕ್ ಖಾತೆಗೆ ಜಮಾ ಆಗದೆ ಇರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 30 ದಿನಗಳೊಳಗೆ ಪರಿಶೀಲನಗೊಳ್ಳದ ರಿಟರ್ನ್ ಅಮಾನ್ಯವಾಗುವುದಲ್ಲದೆ, ರಿಟರ್ನ್ ಸಲ್ಲಿಸಿಯೇ ಇಲ್ಲವೆಂದು ನಿಯಮಾವಳಿಗಳ ಪ್ರಕಾರ ಪರಿಗಣಸಲಾಗುತ್ತದೆ.
2. ಸರಿಯಾದ ಬ್ಯಾಂಕ್ ಖಾತೆ ವಿವರ ನೀಡದಿರುವುದು:
ರಿಫಂಡ್ ಮೊತ್ತವು ಈಗ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ರಿಟರ್ನ್ ಸಲ್ಲಿಸುವಾಗ ಪ್ರೊಫೈಲ್ ನಲ್ಲಿ ಸರಿಯಾದ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವುದು ಕಡ್ಡಾಯ, ಬ್ಯಾಂಕ್ ಖಾತೆ ಸಂಖ್ಯೆ, IFSC ಸಂಖ್ಯೆ ಮತ್ತು ಬ್ಯಾಂಕ್‌ನ ಹೆಸರು ತಪ್ಪಾಗಿ ನಮೂದಿಸಿದ್ದರೆ ರಿಫಂಡ್ ಜಮೆಯಾಗುವುದಿಲ್ಲ ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಮಾನ್ಯಗೊಂಡ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬಾರದು.
ಕೆಲವೊಮ್ಮೆ ಎರಡು ಬ್ಯಾಂಕ್ ವಿಲೀನಗೊಂಡಿದ್ದರೆ, ಹೊಸ ಖಾತೆಯ ವಿವರಗಳನ್ನು ಪ್ರೊಫೈಲ್ ನಲ್ಲಿ ನಮೂದಿಸುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ಪೂರ್ವ-ದೃಢಿಕರಿಸಿದ ಬ್ಯಾಂಕ್ ಖಾತೆಗೆ ಮಾತ್ರ ತೆರಿಗೆ ರಿಫಂಡ್ ಜಮೆ ಮಾಡಲಾಗುತ್ತದೆ. ನಿಮ್ಮ ಬ್ಯಾಂಕ್ ಹಾಳೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪೂರ್ವ-ದೃಢೀಕರಿಸಿವೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪ್ಯಾನ್ ಕಾರ್ಡ್ ಜತೆ ಜೋಡಣೆ ಯಾಗಿರಬೇಕು. ಅದರ ಸ್ಟೇಟಸ್ Validated ಎಂದು ಇರಬೇಕು. ಈ ಪ್ರಕ್ರಿಯೆ ಇಲ್ಲದಿದ್ದರೆ ರಿಫಂಡ್ ಜಮೆಯಾಗುವುದಿಲ್ಲ.
3. ತಾಳೆಯಾಗದ ಆದಾಯ ಮತ್ತು ತೆರಿಗೆ ಪಾವತಿ:
ರಿಟರ್ನ್ ಸಲ್ಲಿಸುವ ಪ್ರಮುಖ ಉದ್ದೇಶವೇ ಗಳಿಸಿರುವ ಆದಾಯ ಮತ್ತು ಅದರ ಮೇಲಿನ ತೆರಿಗೆ ಪಾವತಿಯ ವಿವರಗಳನ್ನು ದೃಡೀಕರಿಸಿ, ತೆರಿಗೆ ಪಾವತಿ ಆಥವಾ ರಿಫಂಡ್ ಪಡೆಯುವುದು.
ರಿಟರ್ನ್ ಸಲ್ಲಿಸುವುದಕ್ಕಿಂತ ಪೂರ್ವದಲ್ಲಿಯೇ ಫಾರ್ಮ್-26 AS Annual Information Statement (ಈ ಎರಡು ವಿವರಣಾ ಪಟ್ಟಿಯು ಆದಾಯ ತೆರಿಗೆ ಜಾಲತಾಣದ ನಮ್ಮ ಪ್ರೊಫೈಲ್‌ನಲ್ಲಿ ಇಡೀ ಹಣಕಾಸು ವರ್ಷದಲ್ಲಿ ನಾವು ಗಳಿಸಿರುವ, ಹೂಡಿಕೆ ಮಾಡಿರುವ ತೆರಿಗೆ ಪಾವತಿಮಾಡಿರುವ ವಿವರಗಳು ನಮ್ಮ ಪ್ಯಾನ್ ಸಂಖ್ಯೆಯ ಆಧಾರದ ಮೇಲೆ ದೊರೆಯುತ್ತದೆ) ಮತ್ತು ನಾವು ನಮೂದಿಸುತ್ತಿರುವ ವಿವರಗಳು ತಾಳೆ ಹೊಂದುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ರಿಟರ್ನ್ ಸಲ್ಲಿಸಬೇಕು. ಒಂದು ಪಕ್ಷ ಈ ಮೂರು ತಾಳೆಯಾಗದಿದ್ದರೆ ತೆರಿಗೆ ರಿಫಂಡ್ ಖಾತೆಗೆ ಜಮೆಯಾಗದೆ ವಿಳಂಬವಾಗುವುದು.
4. ಹಿಂದಿನ ವರ್ಷಗಳ ಬಾಕಿ ತೆರಿಗೆ ಬೇಡಿಕೆಗಳು (Outstanding Tax Demands):
ಹಿಂದಿನ ಹಣಕಾಸು ವರ್ಷಗಳ ತೆಂಗೆ ಬೇಡಿಕೆಗಳು ಉಳಿದುಕೊಂಡಿದ್ದರೆ ಅಥವಾ ಬಾಕಿ ತೆರಿಗೆಗಳನ್ನು ಪಾವತಿಸದಿದ್ದರೆ ಈ ಸಂದರ್ಭಗಳಲ್ಲಿ ಪ್ರಸ್ತುತ ವರ್ಷದ ತೆರಿಗೆ ರಿಫಂಡ್ ನ್ನು ಬಾಕಿ ಇರುವ ಬೇಡಿಕೆ ಮೊತ್ತಗಳಿಗೆ ಹೊಂದಿಸಿಲಾಗುತ್ತದೆ. ಹೀಗೆ ಮಾಡಿದಾಗ, ಕಡಿಮೆ ತೆರಿಗೆ ರಿಫಂಡ್ ಜಮಾ ಆಗಬಹುದು ಅಥವಾ ಯಾವುದೇ ಮರುಪಾವತಿ ದೊರೆಯದಿರಬಹುದು.
5. ಸಲ್ಲಿಸಿದ ರಿಟರ್ನ್‌ಗಳಲ್ಲಿನ ಲೋಪದೋಷಗಳು:
ಆದಾಯವನ್ನು ಸರಿಯಾಗಿ ನಮೂದಿಸದಿದ್ದರೆ ಅಥವಾ ಸರಿಯಾದ ತೆರಿಗೆ ಕಡಿತಗಳನ್ನು (Deductions) ತೋರಿಸದಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ರಿಟರ್ನ್ ಅನ್ನು ಸಂಸ್ಕರಿಸುವಾಗ ಹೆಚ್ಚು ತೆರಿಗೆ ಬಾಕಿ ಇದೆ ಎಂದು ನಿರ್ಧರಿಸಬಹುದು. ಹೀಗಾಗಿ ನಿಮ್ಮ ಪ್ರಕಾರದ ತೆರಿಗೆ ರಿಫಂಡ್ ಜಮೆಯಾಗದೆ ಇರಬಹುದು.
6. ಕರನಿರ್ಧಾರಣ ಪ್ರಕ್ರಿಯೆಗೆ (Scrutiny) ಒಳಪಡುವುದು:
ಆದಾಯ ತೆರಿಗೆ ಇಲಾಖೆ ಕೆಲವೊಮ್ಮೆ ಕೆಲವು ರಿಟರ್ನ್‌ಗಳನ್ನು ಆಯ್ದುಕೊಂಡು ಕರನಿರ್ಧಾರಣ ಕ್ರಿಯೆಗೆ (ಟ್ಯಾಕ್ಸ್ ಅಸೆಸ್ ಮೆಂಟ್) ಒಳಪಡಿಸುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನ ಮೊತ್ತದ ತೆರಿಗೆ ರಿಫಂಡ್ ಗಳು ಇದ್ದಾಗ ಅಥವಾ ಆದಾಯ ಮತ್ತು ಹೂಡಿಕೆಗಳಲ್ಲಿ ದೊಡ್ಡ ವ್ಯತ್ಯಾಸಗಳಿದ್ದಾಗ ಆಗುವ ಪ್ರಕ್ರಿಯೆ, ಪ್ರತಿವರ್ಷ ಆದಾಯ ತೆರಿಗೆ ಇಲಾಖೆ ಕರನಿರ್ಧಾರಣ ನಿಯಮಾವಳಿಗಳನ್ನು ರೂಪಿಸಿ ಯಾವುದೇ ರಿಟರ್ನ್ ಈ ನಿಯಮಾವಳಿಗಳ ಅಡಿಯಲ್ಲಿ ಬಂದರೆ, ರಿಟರ್ನ್ ಸಂಸ್ಕರಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಯ ಹಿಡಿಯುತ್ತದೆ. ಇದು ಪೂರ್ಣಗೊಂಡ ನಂತರದೇ ರಿಫಂಡ್ ಖಾತೆಗೆ ಜಮೆಯಾಗುತ್ತದೆ.
7. ದೊಡ್ಡ ಮೊತ್ತದ ತೆರಿಗೆ ರಿಫಂಡ್ ಗಳು:
ದೊಡ್ಡ ಮೊತ್ತದ ರಿಫಂಡ್‌ಗಳ ರಿಟರ್ನ್‌ಗಳನ್ನು ತೆರಿಗೆ ಇಲಾಖೆಯು ಪರಿಶೀಲಿಸುತ್ತದೆ. ಇಂತಹ ಪ್ರಕರಣದಲ್ಲಿ ಕರನಿರ್ಧಾರಣ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಕೈಗೊಳ್ಳುವ ಸಾಧ್ಯತೆ ಹೆಚ್ಚು ಹಾಗಾಗಿ, ಸಹಜವಾಗಿಯೇ ರಿಫಂಡ್ ಖಾತೆಗೆ ಜಮಾಗೊಳ್ಳಲು ವಿಳಂಬವಾಗಬಹುದು.
8. ಐಟಿ ಜಾಲತಾಣದಲ್ಲಿನ ತಾಂತ್ರಿಕ ದೋಷಗಳು:
ತೆರಿಗೆ ಇಲಾಖೆಯ ಸಂಸ್ಕರಣಾ ವ್ಯವಸ್ಥೆಗಳಲ್ಲಿ ಕೆಲವೊಮ್ಮೆ ತಾಂತ್ರಿಕ ದೋಷಗಳು ಅಥವಾ ಸಿಸ್ಟಮ್ ದೋಷಗಳು ತೆರಿಗೆ ರಿಫಂಡ್ ವಿತರಣೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು.
ಸಮಸ್ಯೆ ನಿವಾರಣೆಗೆ ಏನು ಮಾಡಬಹುದು?
▪️ಮೊದಲು ಸಮಸ್ಯೆ ಏನಾಗಿದೆ ಎಂದು ಅರಿಯಲು ರಿಟರ್ನ್ ಸಲ್ಲಿಸಿದ ಬಳಿಕ ಇ-ಮೇಲ್ ಮತ್ತು ಮೊಬೈಲ್ಗೆ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಬಂದಿರುವುದನ್ನು ಗಮನಿಸಬೇಕು ಮತ್ತು ಆ ಮಾಹಿತಿ ಅನ್ವಯ ನಡೆದುಕೊಳ್ಳಬೇಕು.
▪️ಆದಾಯ ತೆರಿಗೆ ಇ-ಫೈಲಿಂಗ್ ಜಾಲತಾಣದಲ್ಲಿ ನಿಮ್ಮ ರಿಟರ್ನ್ ಸ್ಟೇಟಸ್ ನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು. ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಮತ್ತೊಮ್ಮೆ ದೃಢೀಕರಿಸಬೇಕು.
▪️ಯಾವುದೇ ಬಾಕಿ ತೆರಿಗೆ ಬೇಡಿಕೆಗಳಿದ್ದರೆ, ಅವುಗಳನ್ನು ಪಾವತಿಸಿ ಅಥವಾ ಆದಾಯ ತೆರಿಗೆ ಇಲಾಖೆಗೆ ಪ್ರತಿಕ್ರಿಯೆ ನೀಡುವುದು ಸೂಕ್ತ. ಸಮಸ್ಯೆ ಬಗೆಹರಿಯದಿದ್ದರೆ, ಆದಾಯ ತೆರಿಗೆ ಇಲಾಖೆಯ ಅಧಿಕೃತ ಸಹಾಯವಾಣಿ ಸಂಪರ್ಕಿಸಿ.