GUEST TEACHER: ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರವೇ ಅತಿಥಿ ಶಿಕ್ಷಕರನ್ನು ನೇಮಿಸಲು ನಿರ್ಧರಿಸಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಎಸ್. ಬಂಗಾರಪ್ಪ ಹೇಳಿದ್ದಾರೆ.
ಶನಿವಾರ ಶಿವಮೊಗ್ಗದಲ್ಲಿ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, “ಅನುದಾನಿತ ಶಾಲೆಗಳಲ್ಲಿನ ಸುಮಾರು 6 ಸಾವಿರ ಮತ್ತು ಸರ್ಕಾರಿ ಶಾಲೆಗಳಲ್ಲಿನ 12 ಸಾವಿರ ಹುದ್ದೆಗಳನ್ನು ಸೇರಿಸಿ ಒಟ್ಟು 18 ಸಾವಿರ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತಿದೆ. ಅದರ ಹೊರತಾಗಿ, ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಆಯಾ ಸಂಸ್ಥೆಗಳಿಗೆ ಸರ್ಕಾರ ಅವಕಾಶ ನೀಡಲಿದೆ,” ಎಂದು ಹೇಳಿದರು.
ಅವರು ಮುಂದುವರಿದು, “ಸುಮಾರು 4ರಿಂದ 5 ಸಾವಿರ ಅತಿಥಿ ಶಿಕ್ಷಕರನ್ನು ಅನುದಾನಿತ ಶಾಲೆಗಳಿಗೆ ನೇಮಕ ಮಾಡಬೇಕಾಗಬಹುದು. ಅವರಿಗೆ ಗೌರವಧನವನ್ನು ಸರ್ಕಾರವೇ ಪಾವತಿಸಲಿದೆ. ಕನ್ನಡ ಮಾಧ್ಯಮದ ಶಾಲೆಗಳ ಉಳಿವಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ಹೇಳಿದರು.
ಅಂಗವಿಕಲ ಮಕ್ಕಳಿಗೆ ಚಿಕಿತ್ಸೆ ಮತ್ತು ಶಿಕ್ಷಣ ಎರಡಕ್ಕೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಎರಡು ವಸತಿಗೃಹ ಶಾಲೆಗಳನ್ನು ಆರಂಭಿಸಲು ಸಜ್ಜಾಗಿದೆ ಎಂದು ಸಚಿವರು ತಿಳಿಸಿದರು.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೇರಿಗೆ ಹಾಗೂ ಸಂಚಾಲಕ ಚಂದ್ರಶೇಖರ ಹೊನ್ನಾಳಿ ಉಪಸ್ಥಿತರಿದ್ದರು.
> “1995ರ ನಂತರದ 10 ವರ್ಷಗಳ ಅವಧಿಯ ಶಾಲೆಗಳನ್ನು ಅನುದಾನ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಆ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡುತ್ತಿದ್ದಂತೆಯೇ ಪ್ರಕ್ರಿಯೆ ಆರಂಭವಾಗಲಿದೆ,”
— ಮಧು ಎಸ್. ಬಂಗಾರಪ್ಪ, ಶಿಕ್ಷಣ ಸಚಿವರು