Saturday, October 4, 2025

National Security Act: ರಾಷ್ಟ್ರೀಯ ಭದ್ರತಾ ಕಾಯಿದೆ,ಕಾಯಿದೆಯ ಮುಖ್ಯಾಂಶಗಳು

  ISARESOURCEINFO       Saturday, October 4, 2025
National Security Act: ರಾಷ್ಟ್ರೀಯ ಭದ್ರತಾ ಕಾಯಿದೆ,ಕಾಯಿದೆಯ ಮುಖ್ಯಾಂಶಗಳು.




ಆರನೇ ಅನುಸೂಚಿಯ ಅಡಿಯಲ್ಲಿ ಲಡಾಖ್‌ಗೆ ರಾಜ್ಯ 'ಸ್ಥಾನಮಾನ ಹಾಗೂ ವಿಶೇಷ ರಕ್ಷಣೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಸೋನಂ ವಾಂಗಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ. ಲೇಹ್ ನಲ್ಲಿ ಸೆಪ್ಟೆಂಬರ್ 25ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ವಾಂಗಚುಕ್ ಅವರ ಪಾತ್ರವಿದೆ ಎಂದು ಕೇಂದ್ರ ಸರಕಾರ ಆರೋಪಿಸಿದೆ. ಲೇಹ್ ನ ಪ್ರತಿಭಟನೆಯಲ್ಲಿ ಪೋಲೀಸರ ಗುಂಡಿಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

ಅತ್ಯಂತ ಕಠಿಣ ಕಾನೂನು: 

ದೇಶದ ಭದ್ರತೆಗೆ ತೊಡಕಾಗುವ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಸಮುದಾಯದ ವಿರುದ್ಧ ಕ್ರಮ ಕೈಗೊಳ್ಳಲು ನೆರವಾಗುತ್ತದೆ. ಅಲ್ಲದೆ, ಯಾವುದೇ ವ್ಯಕ್ತಿಯಿಂದ ದೇಶದ ಭದ್ರತೆಗೆ ಕಂಟಕವಾಗುತ್ತದೆ ಎಂಬ ಸುಳಿವು ಸಿಕ್ಕ ಕೂಡಲೇ ಆತನನ್ನು ಬಂಧಿಸಲು ಅನುವು ಮಾಡಿಕೊಡುತ್ತದೆ. ಈ ಕಾನೂನನ್ನು ದೇಶ ವಿಭಜನೆಯ ಪರ ಹೋರಾಟಗಾರರು, ಗ್ಯಾಂಗ್‌ಸ್ಟರ್‌ಗಳು, ಧಾರ್ಮಿಕ ಪ್ರಚೋದಕರ ವಿರುದ್ಧ ಬಳಸಲಾಗುತ್ತದೆ. ಈ ಕಾಯಿದೆ ಅಡಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ರಾಷ್ಟ್ರ ಭದ್ರತೆಗೆ ಅಪಾಯ ತಂದೊಡ್ಡುವವರನ್ನು ಮುಂಚಿತವಾಗಿ ಬಂಧಿಸಬಹುದು.

ಕೃತ್ಯ ತಡೆ ಬಂಧನ: 

ರಾಷ್ಟ್ರದ ಭದ್ರತೆಗೆ ಅಡ್ಡಿ ಪಡಿಸುವ, ದೇಶಕ್ಕೆ ಬೆದರಿಕೆಯೊಡ್ಡುವವರನ್ನು ಬಂಧಿಸುವ ಮತ್ತು ಯಾವುದೇ ವ್ಯಕ್ತಿಯಿಂದ ದೇಶದ ಭದ್ರತೆಗೆ ಅಪಾಯವಿದೆ ಎಂಬ ಮುನ್ಸೂಚನೆ ಸಿಕ್ಕ ಕೂಡಲೇ ಆತನನ್ನು ಬಂಧಿಸುವ ಸಲುವಾಗಿ 1950ರಲ್ಲಿ ತಡೆ ಬಂಧನ ಕಾಯಿದೆಯನ್ನು ಜಾರಿಗೆ ತರಲಾಯಿತು. ನಂತರ ಮೇಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆ್ಯಕ್ಟ್-1971 ಅನ್ನು ಜಾರಿಗೆ ತಂದಿದೆ. ಈ ಕಾಯಿದೆಯು ತುರ್ತು ಪರಿಸ್ಥಿತಿಯನ್ನು ದುರುಪಯೋಗವಾದ ಕಾರಣ, 1978ರಲ್ಲಿ ಎಂಐಎಸ್‌ಎ ಅನ್ನು ಜಾರಿಗೆ ತರಲಾಯಿತು. ಈ ಕಾಯಿದೆ ಸಮರ್ಪಕವಾಗಿ ಅನುಸರಣೆಯಾಗದ ಕಾರಣ 1980ರಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆ ಪರಿಚಯಿಸಲಾಯಿತು.

ಪ್ರಕರಣಗಳು:

▪️2023: ಸಿಖ್ ಪ್ರಚಾರಕ ಅಮೃತಪಾಲ್ ಸಿಂಗ್ ಅವರನ್ನು ಬಂಧಿಸಿ ಅಸ್ಸಾಂಗೆ ಕರೆದೊಯ್ಯಲಾಯಿತು.

▪️2017: ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಜಾದ್ ರಾವಣ ಅವರನ್ನು ಉತ್ತರಪ್ರದೇಶದಲ್ಲಿ ಬಂಧಿ ಸಲಾಯಿತು. ನಂತರ ಸುಪ್ರೀಂಕೋರ್ಟ್ ಆದೇಶದಿಂದ ಬಿಡುಗಡೆ ಹೊಂದಿದರು.

▪️2020: ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಹಲವರನ್ನು ಬಂಧಿಸಲಾಯಿತು. ಡಾ.ಕಫೀಲ್ ಖಾನ್ ಅವರನ್ನು ಬಂಧಿಸಿದ ಪ್ರಕರಣದಲ್ಲಿ ಲಹಾಬಾದ್ ಹೈಕೋರ್ಟ್ ಬಿಡುಗಡೆ ಮಾಡಿತು. ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು, ಉತ್ತರಪ್ರದೇಶದಲ್ಲಿ ದಂಗಾ ಹಾಗೂ ಗೋಹತ್ಯೆ ಪ್ರಕರಣಗಳಲ್ಲಿಯೂ ಎನ್‌ಎಸ್‌ಎ ಬಳಸಲಾಗಿದೆ.

ಕಾಯಿದೆಯ ಮುಖ್ಯಾಂಶಗಳು

▪️ರಾಷ್ಟ್ರದ ಹಿತಕ್ಕೆ ಧಕ್ಕೆ ತರುವ ದೃಷ್ಟಿಯಿಂದ ಶತ್ರು ರಾಷ್ಟ್ರಗಳೊಂದಿಗೆ ನಂಟನ್ನು ಹೊಂದಿರುವ ವ್ಯಕ್ತಿಗಳ ವಿರುದ್ಧ ಈ ಕಾಯಿದೆಯನ್ನು ಬಳಸಬಹುದು.

▪️ಸಾರ್ವಜನಿಕ ಶಾಂತಿ ಮತ್ತು ಅಗತ್ಯ ಸರಕುಗಳ ಪೂರೈಕೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆಂದು ಶಂಕೆ ವ್ಯಕ್ತವಾದರೆ ಕಾಯಿದೆಯಡಿ ಕ್ರಮ ಕೈಗೊಳ್ಳಬಹುದು.

▪️ಜಿಲ್ಲಾಧಿಕಾರಿ ಅಥವಾ ಪೊಲೀಸ್ ಆಯುಕ್ತರು ಈ ಅಧಿ ಕಾರವನ್ನು ಬಳಸಬಹುದು.

▪️ಕಾಯಿದೆಯಡಿ ಬಂಧನಕ್ಕೊಳಗಾದ ವ್ಯಕ್ತಿಗೆ 5ರಿಂದ 15 ದಿನಗಳ ಒಳಗೆ ಬಂಧನಕ್ಕೆ ಕಾರಣವಾದ ಅಂಶಗಳನ್ನು ತಿಳಿಸಬೇಕು.

▪️ಬಂಧಿತನು ಸರಕಾರಕ್ಕೆ ಮನವಿ ಸಲ್ಲಿಸಬಹುದು. ಸರಕಾರವು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಒಳಗೊಂಡಂತೆ ಸಮಿತಿ ರಚಿಸಬಹುದು. ಮೂರು ವಾರಗಳ ಒಳಗೆ ತನಿಖೆ ನಡೆಸಬೇಕು. ಒಂದು ವೇಳೆ ಬಂಧನಕ್ಕೆ ಸರಕಾರಣವಿಲ್ಲದಿದ್ದರೆ ವ್ಯಕ್ತಿಯನ್ನು ಬಿಡುಗಡೆ ಮಾಡಬಹುದು.

ಟೀಕೆ

▪️ಬಂಧಿತನಿಗೆ ವಕೀಲರ ಸಹಾಯ ಪಡೆಯುವ ಹಕ್ಕಿಲ್ಲ, ಸರಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ಮಾಹಿತಿಯನ್ನು ಮರೆಮಾಡಬಹುದು. ಹೀಗಾಗಿ ಅಧಿಕಾರಿಗಳ ಕೈಯಲ್ಲಿ ಹೆಚ್ಚಿನ ಸ್ಟೇಚ್ಛಾಧಿಕಾರವಿದೆ ಎಂಬ ಟೀಕೆ ಭುಗಿಲೆದ್ದಿದೆ.

ವಾಂಗಚುಕ್ ಗಿರುವ ಮುಂದಿರುವ ಆಯ್ಕೆಗಳು: ವಾಂಗಚುಕ್ ಅವರು ಸರಕಾರಕ್ಕೆ ಮನವಿ ಸಲ್ಲಿಸಬಹುದು ಅಥವಾ ಸಲಹಾ ಮಂಡಳಿಯ ತೀರ್ಪಿಗಾಗಿ ಕಾಯಬಹುದು. ಪರ್ಯಾಯವಾಗಿ, ಅವರು ಅನುಚ್ಛೇದ 226ರ ಅಡಿಯಲ್ಲಿ ಹೈಕೋರ್ಟ್‌ಗೆ ಅಥವಾ ಅನುಚ್ಛೇದ 32ರ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ, ಬಂಧನದ ಕಾನೂನಾತ್ಮಕತೆಯನ್ನು ಪ್ರಶ್ನಿಸಬಹುದು.


logoblog

Thanks for reading National Security Act: ರಾಷ್ಟ್ರೀಯ ಭದ್ರತಾ ಕಾಯಿದೆ,ಕಾಯಿದೆಯ ಮುಖ್ಯಾಂಶಗಳು

Newest
You are reading the newest post