ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 10 ಹಾಗೂ 12ನೇ ತರಗತಿಯ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣಪತ್ರಗಳನ್ನು ನೀಡಲಿದೆ. ಈ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಸಾಮರ್ಥ್ಯಾಭಿವೃದ್ಧಿ, ಸಾಧನಾ ಸಮೀಕ್ಷೆ ಹಾಗೂ ಶಿಕ್ಷಣ ಮಂಡಳಿಗಳ ಮೌಲ್ಯಮಾಪನಕ್ಕೆ ಏಕರೂಪದ ವ್ಯವಸ್ಥೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಹೆಜ್ಜೆಯನ್ನು ಇಟ್ಟಂತಾಗಿದೆ.
ದೇಶದ ವಿವಿಧ ಶೈಕ್ಷಣಿಕ ಮಂಡಳಿಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ನೆರವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಿದೆ.
ಇತ್ತೀಚೆಗಷ್ಟೇ ಕೇಂದ್ರ ಶಿಕ್ಷಣ ಸಚಿವಾಲಯವು ಈ ಕುರಿತ ಗೆಜೆಟ್' ಅಧಿಸೂಚನೆಯನ್ನು ಹೊರಡಿಸಿದೆ.
ಈ ಮೊದಲು ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿ (ಎಐಯು) ಈ ಕಾರ್ಯವನ್ನು ಮಾಡುತ್ತಿತ್ತು. ಈ ಅಧಿಸೂಚನೆ ಮೂಲಕ ಅದರ ಅಧಿಕಾರ ಮೊಟಕಾಗಿದ್ದು, ಎನ್‌ಸಿಇಆರ್‌ಟಿ ಈ ಹೊಣೆಗಾರಿಕೆಯನ್ನು ನಿಭಾಯಿಸಲಿದೆ.
ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರವಾಗಿರುವ ಪರ್ಫಾಮೆನ್ಸ್ ಅಸೆಸ್ ಮೆಂಟ್, ರಿವ್ಯೂ ಆ್ಯಂಡ್ ಅನಾಲಿಸಿಸ್ ಆಫ್ ನಾಲೆಜ್ ಫಾರ್ ಹೊಲಿಸ್ಟಿಕ್ ಡೆವಲೆಪ್‌ಮೆಂಟ್- ಪರಖ್ (ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ಷಮತೆ, ಜ್ಞಾನದ ಪರಿಶೀಲನೆ ಮತ್ತು ಮೌಲ್ಯಮಾಪನ) ಮೂಲಕ ಈ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ. ದೇಶದ ಯಾವುದೇ ಶಿಕ್ಷಣ ಮಂಡಳಿಗಳು ಅಥವಾ ಶಿಕ್ಷಣ ಮಂಡಳಿಗಳು ನೀಡುವ ಕೋರ್ಸ್ ಗಳು ಹಾಗೂ ಶಿಕ್ಷಣ 10ನೇ ಅಥವಾ 12ನೇ ತರಗತಿಗೆ ತತ್ಸಮಾನ ಹೌದೋ? ಅಲ್ಲವೋ? ಎಂಬುದನ್ನು ಇದು ನಿರ್ಧರಿಸಲಿದೆ.
ಪ್ರಯೋಜನವೇನು?
▪️ಈ ಪ್ರಮಾಣಪತ್ರದಿಂದ ದೇಶದ ಯಾವುದೇ ಭಾಗದಲ್ಲಿ ವಿವಿಧ ಶೈಕ್ಷಣಿಕ ಮಂಡಳಿಗಳಲ್ಲಿ ವ್ಯಾಸಂಗ ನಡೆಸಲು ಸಾಧ್ಯವಾಗಲಿದೆ.
▪️ಒಂದು ಮಂಡಳಿಯಿಂದ ಮತ್ತೊಂದು ಮಂಡಳಿಗೆ ವಲಸೆ ಸುಲಭವಾಗಿ ನಡೆಯಲಿದೆ.
▪️ಈ ಪ್ರಮಾಣಪತ್ರವು ಅಖಿಲ ಭಾರತ ಮಟ್ಟದ್ದಾಗಿದ್ದು, ದೇಶದಾದ್ಯಂತ ಎಲ್ಲ ಮಂಡಳಿಗಳಿಗೂ ಅನ್ವಯವಾಗಲಿದೆ.
ಸಾಂಸ್ಥಿಕ ಸ್ವರೂಪ:
ಉನ್ನತ ಶೈಕ್ಷಣಿಕ ಮಾನದಂಡಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತತ್ಸಮಾನ ವಿದ್ಯಾರ್ಹತೆಯನ್ನು ಕಂಡುಕೊಳ್ಳಲು ಅತ್ಯಂತ ದೃಢವಾದ ಹಾಗೂ ಶೈಕ್ಷಣಿಕವಾಗಿ ಕಠಿಣ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ. ಈ ವಿಧಾನವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಭಾರತದ ಎಲ್ಲ ಖಾಸಗಿ ಶಾಲಾ ಮಂಡಳಿಗಳಿಗೂ ಅನ್ವಯವಾಗಲಿದೆ.
ಎನ್‌ಸಿಇಆರ್‌ಟಿ ನೀಡಿದ ತತ್ಸಮಾನ ಪ್ರಮಾಣಪತ್ರಗಳನ್ನು ಎಲ್ಲ ಶೈಕ್ಷಣಿಕ ಮಂಡಳಿಗಳಿಗೂ ಯಾವುದೇ ತಾರತಮ್ಯವಿಲ್ಲದೆ ಅನುಸರಿಸಬೇಕಾಗುತ್ತದೆ.
ಏನಿದು ಪರಖ್?
ರಾಷ್ಟ್ರವ್ಯಾಪಿ ವಿವಿಧ ಶೈಕ್ಷಣಿಕ ಮಂಡಳಿಗಳ ಮೌಲ್ಯಮಾಪನ ಪದ್ಧತಿಯನ್ನು ಏಕೀಕೃತಗೊಳಿಸುವ ನಿಟ್ಟಿನಲ್ಲಿ ಎನ್ ಸಿಇಆರ್‌ಟಿ ಪರಖ್ ಸಂಸ್ಥೆಯನ್ನು ರೂಪಿಸಿದೆ.
ಮೌಲ್ಯಮಾಪನ ಪದ್ಧತಿಯ ಏಕೀಕರಣಕ್ಕಾಗಿ ಸಂಸ್ಥೆಯು ಈಗಾಗಲೇ ಕೇಂದ್ರದ ಹಾಗೂ ವಿವಿಧ ರಾಜ್ಯಗಳ 32 ಶಿಕ್ಷಣ ಮಂಡಳಿಗಳ ಜತೆಗೆ ಸಂವಾದ ನಡೆಸಿತ್ತು. ಇದರನ್ವಯ ಶಾಲಾ ಶಿಕ್ಷಣ ಹಂತದಲ್ಲಿನ ಮೌಲ್ಯಮಾಪನ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾಗಲಿದೆ. ಈ ಕುರಿತ ವರದಿ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ.