2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1ಕ್ಕೆ ಶಾಲಾ ವಿದ್ಯಾರ್ಥಿಗಳ ನೋಂದಣಿ ಕುರಿತು ಮಾರ್ಗಸೂಚಿ ಪ್ರಕಟ
2026ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಪ್ರೌಢ ಶಾಲಾ/ ಕಾಲೇಜುಗಳಿಂದ (ಪ್ರೌಢ ಶಾಲಾ ವಿಭಾಗ) ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳನ್ನು ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಿಂದ 2026ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CCERF) ವಿವರಗಳನ್ನು ಮಂಡಳಿಯ https://kseab.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಅಪ್ ಲೋಡ್ ಮಾಡಲು ಕೆಳಕಂಡಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ವಿದ್ಯಾರ್ಥಿಗಳ ನೋಂದಣಿಗೆ ಅಗತ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ನಿಗಧಿಪಡಿಸಿದ ದಿನಾಂಕದಲ್ಲಿ ಶಾಲಾ ಲಾಗಿನ್‌ನಲ್ಲಿ ವಿದ್ಯಾರ್ಥಿಗಳ ನೋಂದಣಿಯನ್ನು ಮಾಡುವುದು.
ಈ ಸಾಲಿನಿಂದ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿಯನ್ನು ನೇರವಾಗಿ ಅಭ್ಯರ್ಥಿಗಳೇ ಮಂಡಲಿ ಜಾಲತಾಣದಲ್ಲಿ ನೋಂದಾಯಿಸಬಹುದಾಗಿದ್ದು, ಈ ಕುರಿತ ಮಾರ್ಗಸೂಚಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.
1. ಆಡಳಿತ ವಿಭಾಗ
ಖಾಸಗಿ ಪ್ರೌಢಶಾಲೆಗಳ ನೋಂದಣಿ ಮತ್ತು ಮಾನ್ಯತೆ :-
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ- 1966 Chapter VI ನಿಯಮ 36 ಮತ್ತು 37ರನ್ವಯ ಮಾನ್ಯತೆ ಪಡೆದ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಮಾತ್ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಾಯಿಸಲು ಅವಕಾಶವಿರುತ್ತದೆ.
ಕರ್ನಾಟಕ ಶಿಕ್ಷಣ ಕಾಯ್ದೆ-1983 ನಿಯಮ-30, 31, 33, 36 ಹಾಗೂ 38 ರನ್ವಯ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳು ನೋಂದಣಿ ಮತ್ತು ಮಾನ್ಯತೆಯನ್ನು ಕಡ್ಡಾಯವಾಗಿ ಪಡೆದಿರಬೇಕು ಹಾಗೂ ಪ್ರೌಢಶಾಲೆಯಲ್ಲಿ ಬೋಧನೆ ಮಾಡುವ ಮಾಧ್ಯಮಗಳಿಗನುಗುಣವಾಗಿ ಸಕ್ಷಮ ಪ್ರಾಧಿಕಾರದಿಂದ ಮಾನ್ಯತೆಯು ನವೀಕರಣವಾಗಿರಬೇಕು.
2025-26ನೇ ಸಾಲಿನ ಮಾನ್ಯತೆ ನವೀಕರಣವನ್ನು ಸಕ್ಷಮ ಪ್ರಾಧಿಕಾರದಿಂದ ಸಕಾಲದಲ್ಲಿ ಪಡೆದುಕೊಳ್ಳುವುದು.
. ಅಂತಿಮ ಪ್ರವೇಶ ಪತ್ರವನ್ನು ಮಂಡಲಿಯಿಂದ ಶಾಲೆಗಳಿಗೆ ವಿತರಿಸುವ ಅವಧಿಯೊಳಗೆ 2025-26ನೇ ಸಾಲಿನ ಮಾನ್ಯತೆ ನವೀಕರಣ ಹೊಂದುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಅಂತಹ ಶಾಲೆಗಳ ಫಲಿತಾಂಶವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಅಥವಾ ಮಾನ್ಯತೆ ಪಡೆದ ಅನುದಾನಿತ ಪ್ರೌಢಶಾಲೆಗಳ ಮುಖಾಂತರ ಫಲಿತಾಂಶ ಪ್ರಕಟಿಸಲಾಗುವುದು.
ಪಠ್ಯಪುಸ್ತಕ ಕುರಿತು :-
ಶಾಲಾ ವಿದ್ಯಾರ್ಥಿಗಳು:
ಶಾಲಾ ವಿದ್ಯಾರ್ಥಿಗಳು (CCERE) ಪ್ರಸಕ್ತ ಸಾಲಿನ ಪಠ್ಯಪುಸ್ತಕದಂತೆ ಅಭ್ಯಾಸ ಮಾಡಿ 2026ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವುದು.
ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳನ್ನು ಕೆಳಕಂಡಂತೆ ವರ್ಗೀಕರಿಸಲಾಗಿದೆ
1. ಶಾಲಾ ಅಭ್ಯರ್ಥಿಗಳು
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ-1966ರ ChapterVI ನಿಯಮ-36 ಹಾಗೂ 37(1)(ii) ಮತ್ತು Annexure-III ನಿಯಮ-7ರನ್ವಯ, ರಾಜ್ಯದ ಅಧಿಕೃತ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿ ವ್ಯಾಸಂಗ ಮಾಡಿರಬೇಕು ಅಂತಹ ವಿದ್ಯಾರ್ಥಿಯನ್ನು “ಶಾಲಾ ವಿದ್ಯಾರ್ಥಿಯೆಂದು" ಪರಿಗಣಿಸಲಾಗುತ್ತದೆ.
. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು "ಶಾಲಾ ಅಭ್ಯರ್ಥಿಗಳೆಂದು" ಪರಿಗಣಿಸಿದೆ. ಈ ವರ್ಗದ ಸಂಕೇತ “ಸಿ.ಸಿ.ಇ-ಆರ್.ಎಫ್" "CCERF" (Continuous and Comphrehensive Evaluation Regular Fresher) 2 ವರ್ಗೀಕರಿಸಿದೆ.
2. 2025-26ನೇ ಸಾಲಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಖಾಸಗಿ ಅಭ್ಯರ್ಥಿಗಳು (PE), ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು (PR) ಮತ್ತು ಶಾಲಾ ಪುನರಾವರ್ತಿತ ಅಭ್ಯರ್ಥಿಗಳ (CCERR) ನೋಂದಣಿಯನ್ನು ಅಭ್ಯರ್ಥಿಗಳೇ ನೇರವಾಗಿ ಆನ್‌ಲೈನ್ ಮುಖಾಂತರ ನೋಂದಾಯಿಸಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಸದರಿ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ನೋಂದಣಿ ಮಾಡುವ ಕುರಿತು ಮಾರ್ಗಸೂಚಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.
ವಿಶೇಷ ಸೂಚನೆ:- ಸರ್ಕಾರದ ಆದೇಶ ಸಂಖ್ಯೆ:ಇಪಿ 177 ಎಸ್ಎಲ್‌ಬಿ 2021 ದಿನಾಂಕ:06.12.2021ರನ್ವಯ
2011ಕ್ಕೂ ಹಿಂದಿನ ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಎಲ್ಲಾ ವಿಧದ ಪುನರಾವರ್ತಿತ (NSR & NSPR) ಅಭ್ಯರ್ಥಿಗಳು ಅನುತ್ತೀರ್ಣರಾಗಿ ಬಾಕಿ ಇರುವ ವಿಷಯಗಳಿಗೆ 2022ರ ವರ್ಷದ ಮುಖ್ಯ ಪರೀಕ್ಷೆಯಿಂದ ಸತತ ಆರು ಪ್ರಯತ್ನಗಳ ಅವಕಾಶ ನೀಡಿ 2024ರ ಪರೀಕ್ಷೆ-2ರವರೆಗೆ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಕಾಶದ ನಂತರವೂ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳು ನಿಯಮಾನುಸಾರ ಹೊಸದಾಗಿ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು ಎಲ್ಲಾ ವಿಷಯಗಳ ಪರೀಕ್ಷೆಯನ್ನು ತೆಗೆದುಕೊಳ್ಳತಕ್ಕದ್ದು.
II. ಅರ್ಜಿಗಳ ಸ್ವರೂಪ:-
ಶಾಲಾ ವಿದ್ಯಾರ್ಥಿಗಳ (CCERF) ಪರೀಕ್ಷಾ ಅರ್ಜಿಗಳನ್ನು ಮಂಡಳಿಯ ಜಾಲತಾಣದಲ್ಲಿ ಶಾಲಾ ಲಾಗಿನ್ ಮೂಲಕ ಸಲ್ಲಿಸುವುದು, ವಿದ್ಯಾರ್ಥಿಯ ಭಾವಚಿತ್ರವು ಪ್ರವೇಶಪತ್ರ, ಸಿಎನ್‌ಆರ್ ಮತ್ತು ಅಂಕಪಟ್ಟಿಯಲ್ಲಿ ಮುದ್ರಣವಾಗುವ ಕಾರಣ ಭಾವಚಿತ್ರ ಮತ್ತು ಸಹಿಯನ್ನು ಈ ಕೆಳಕಂಡ ರೀತಿಯಲ್ಲಿ ಅಪ್ ಲೋಡ್ ಮಾಡುವುದು.
ಭಾವಚಿತ್ರ: ಫೋಟೋಗಳು ಸಂಪೂರ್ಣ ಬಣ್ಣದಲ್ಲಿ ಹಾಗೂ ಉತ್ತಮ ಗುಣಮಟ್ಟದಲ್ಲಿರಬೇಕು. ಭಾವಚಿತ್ರದಲ್ಲಿ ಶೇ 80 ರಷ್ಟು ಮುಖ ಸ್ಪಷ್ಟವಾಗಿ ಕಾಣುವಂತಿರಬೇಕು, ಸಹಜ ಅಭಿವ್ಯಕ್ತಿ ಇರಬೇಕು. ಕಣ್ಣುಗಳು ತೆರೆದಿರಬೇಕು. ಬಣ್ಣದ ಕನ್ನಡಕಗಳನ್ನು ಧರಿಸಿರಬಾರದು. ಭಾವಚಿತ್ರ 20 ರಿಂದ 80 kb JPEG ಮಾದರಿಯಲ್ಲಿರಬೇಕು. (ಇತ್ತೀಚಿನ ಭಾವಚಿತ್ರಗಳನ್ನು ಮಾತ್ರ).
ವಿದ್ಯಾರ್ಥಿಯ ಸಹಿ: ಬಿಳಿ ಬಣ್ಣದ ಹಾಳೆಯ ಮೇಲೆ ಕಪ್ಪು ಶಾಹಿಯಲ್ಲಿ ಮಾಡಿಸಿರಬೇಕು. ಸಹಿಯ ಗಾತ್ರ 20 ರಿಂದ 80 kb JPEG ಮಾದರಿಯಲ್ಲಿರಬೇಕು.
III. ಪರೀಕ್ಷಾ ಶುಲ್ಕ:-
1. ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ಶಾಲಾ ಅಭ್ಯರ್ಥಿಗಳ (CCERF) ಪರೀಕ್ಷಾ ಶುಲ್ಕ- ₹710-00 ಪ್ರತಿ ವಿದ್ಯಾರ್ಥಿಗೆ
CCERF ಅಭ್ಯರ್ಥಿಗಳ ಪರೀಕ್ಷಾ ನೋಂದಣಿಯನ್ನು ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕವೇ ಅಪ್‌ಲೋಡ್ ಮಾಡಬೇಕು. ನಿಗದಿಪಡಿಸಿದ ಅವಧಿಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಶಾಲಾವಾರು ಪರೀಕ್ಷಾ ಶುಲ್ಕ ಪಾವತಿಗೆ ಸಂಬಂಧಪಟ್ಟಂತೆ ಆನ್‌ಲೈನ್‌ನಲ್ಲಿ ಚಲನ್ ಜನರೇಟ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಸದರಿ ಚಲನ್ ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ನಮೂದಿಸಿರುವ ಮೊತ್ತವನ್ನು ಅದೇ ಚಲನ್ ಬಳಸಿ ಶುಲ್ಕವನ್ನು ಬ್ಯಾಂಕಿನಲ್ಲಿ ಪಾವತಿಸುವುದು. ಡೌನ್ ಲೋಡ್ ಮಾಡಿಕೊಳ್ಳದೇ ಮ್ಯಾನ್ಯೂಯಲ್ (Manual) ಚಲನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಬಾರದು.
ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿಯಿಂದ ಎಲ್ಲಾ ಪ್ರಕ್ರಿಯೆಗಳನ್ನು ಗಣಕೀಕೃತ ಮಾಡಲಾಗಿರುತ್ತದೆ. ಈ ಸಂಬಂಧ ಅಂತಿಮ ಪ್ರವೇಶ ಪತ್ರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಶಾಲಾ ಲಾಗಿನ್‌ನಲ್ಲಿ ಲಭ್ಯವಿರುವ ಸಾಫ್ಟ್ ಪ್ರತಿಯನ್ನು ಪರಿಶೀಲಿಸಬಹುದಾಗಿದೆ.