ಭಾರತೀಯ ರಾಜ್ಯಗಳೊಂದಿಗೆ ಬ್ರಿಟಿಷರ ಸಂಬಂಧಗಳು
ಮೊಗಲ್ ಸಾಮ್ರಾಜ್ಯದ ಅವಶೇಷಗಳಿಂದ ಭಾರತದಲ್ಲಿ ಅನೇಕ ರಾಜ್ಯಗಳು ಹುಟ್ಟಿದುವು. ಅವುಗಳ ಪೈಕಿ ಹೆಚ್ಚಿನವು ಬಲಿಷ್ಠವಾಗಿದ್ದುವು, ವಿಸ್ತಾರವೂ, ಸ್ವತಂತ್ರವೂ ಆಗಿದ್ದುವು. ಮಿಕ್ಕವು ಚಿಕ್ಕವು ಮತ್ತು ಅರೆ . ಸ್ವತಂತ್ರವಾಗಿದ್ದುವು. ಕ್ರಮೇಣ ಅವೆಲ್ಲವೂ ಇಂಗ್ಲಿಷರೊಂದಿಗೆ ಸಂಪರ್ಕಕ್ಕೆ ಬಂದುವು, ಹೆಚ್ಚಿನವು ಅವರಿಗೆ ವೈರಿಗಳಾದುವು. ಕೊನೆಗೆ ಎಲ್ಲವೂ ಬ್ರಿಟಿಷ್ ಸಾರ್ವಭೌಮತ್ವವನ್ನು ಅಂಗೀಕರಿಸಿದುವು. 1857ರ ಕ್ರಾಂತಿಯ ಅನಂತರ ಬ್ರಿಟಿಷರು ಗೆಲ್ಲುವಿಕೆ ಹಾಗೂ ಹೊಸದಾಗಿ ಆಕ್ರಮಣ ಮಾಡಿಕೊಳ್ಳುವ ನೀತಿಯನ್ನು ಕೈ ಬಿಟ್ಟರು. ಆದ್ದರಿಂದ ಅವರಲ್ಲಿ ಅನೇಕರು 1947ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯುವವರೆಗೂ ಅಸ್ಥಿತ್ವದಲ್ಲಿದ್ದವು. ಆಮೇಲೆ ಅವೆಲ್ಲ ಕೋಡೀಕೃತವಾಗಿ ಭಾರತ ಒಕ್ಕೂಟದಲ್ಲಿ ವಿಲೀನವಾದವು.
ಭಾರತದ ರಾಜ್ಯಗಳೊಂದಿಗೆ ಬ್ರಿಟಿಷರ ಸಂಬಂಧಗಳು ಬೇರೆ ಬೇರೆ ಕಾಲಗಳಲ್ಲಿ ಪರಿವರ್ತನೆ ಹೊಂದಿದುವು ಏಕೆಂದರೆ ಆ ಸಂಬಂಧಗಳು ಸಂದರ್ಭಕ್ಕನುಗುಣವಾಗಿ ಆಧರಿತವಾಗಿದ್ದುವು. ಬ್ರಿಟಿಷರು ತಮ್ಮ ಸಾಮ್ರಾಜ್ಯ ಹಿತಾಸಕ್ತಿಗಳನ್ನು ಎಂದೂ ಮರೆಯಲಿಲ್ಲ. ಆಗಾಗ ಬದಲಾವಣೆ ಹೊಂದುತ್ತಲೇ ಹೋದ ಹಿತಾಸಕ್ತಿಗಳಿಗನುಸಾರವಾಗಿ ದೇಶೀಯ ರಾಜ್ಯಗಳೊಂದಿಗೆ ಅವರ ಸಂಬಂಧಗಳು ಬೆಳೆದುವು.
ಕೆ. ಎಂ. ಫಣಿಕ್ಕರ್ ವರ್ಣಿಸಿದಂತೆ ಈ ಸಂಬಂಧಗಳ ಆಧಾರ ಅವು ಈ ಮೂರು ವರ್ಗಗಳಿಗೆ ಸಂಬಂಧಪಟ್ಟವು ಎನ್ನುವುದು :
(ಅ) ಬ್ರಿಟಿಷರೊಂದಿಗೆ ಮಾಡಿಕೊಂಡ ಕರಾರುಗಳ ಪ್ರಕಾರ ಸ್ವತಂತ್ರ ರಾಜ್ಯಗಳಾಗಿದ್ದು ನೇರವಾಗಿ ಬ್ರಿಟಿಷರೊಂದಿಗೆ ವ್ಯವಹಾರ ಮಾಡುತ್ತಿದ್ದವು.
(ಆ) ಯಾರಾದರೊಬ್ಬ ದೇಶೀಯ ರಾಜನ ಮೂಲಕವಾಗಿ ಬ್ರಿಟಿಷರೊಂದಿಗೆ ಸಂಬಂಧವನ್ನು ಇರಿಸಿಕೊಂಡಂಥವು.
(ಇ) ಬ್ರಿಟಿಷರು ಪ್ರಕಟಣೆಗಳು ಮತ್ತು ಸನ್ನದುಗಳ ಮೂಲಕ ಸಂಬಂಧವನ್ನು ವಿವರಿಸಿದಂಥವು. ಬ್ರಿಟಿಷರೊಂದಿಗಿನ ಸಂಬಂಧಗಳು ಈ ರಾಜ್ಯಗಳ ಪ್ರತಿಯೊಂದು ವರ್ಗಕ್ಕೂ ಬೇರೆ ಬೇರೆಯಾಗಿದ್ದುವು.
ಎರಡನೆಯ ಆಧಾರ, ದೇಶದ ರಾಜಕೀಯ ಪರಿಸ್ಥಿತಿಯನ್ನು ಅವಲಂಭಿಸಿದ್ದಿತು. ಬ್ರಿಟಿಷ್ ಅಧಿಕಾರಿಗಳು ಮತ್ತು ದೇಶೀಯ ಅರಸರ ಆಸ್ಥಾನಗಳಲ್ಲಿದ್ದ ರೆಸಿಡೆಂಟರ ಮನೋಭಾವ, ವಿವಿಧ ಗವರ್ನರ್ ಜನರಲ್ಲರ ವ್ಯಕ್ತಿತ್ವಗಳು ಹಾಗೂ ಲಾರ್ಡ್ ವೆಲ್ಲೆಸ್ಲಿಯ ಕಾಲದಿಂದಲೂ ಬ್ರಿಟಿಷರು ಸರ್ವೋನ್ನತ ಶಕ್ತಿಯೆಂದು ಮನ್ನಣೆ ಪಡೆದುದು ಇವೂ ಕೂಡ ಬ್ರಿಟಿಷರು ದೇಶೀಯ ರಾಜ್ಯಗಳೊಂದಿಗಿದ್ದ ಸಂಬಂಧಗಳನ್ನು ನಿರ್ಧರಿಸಿದುವು.
ವಿಲಿಯಂ ಲೀ ವಾರ್ನರ್ ತನ್ನ ದಿ ನೇಟಿವ್ ಸ್ಟೇಟ್ಸ್ ಆಫ್ ಇಂಡಿಯಾ ಎಂಬ ಕೃತಿಯಲ್ಲಿ 1919ರವರೆಗೆ ಬ್ರಿಟಿಷರು ದೇಶೀಯ ರಾಜ್ಯಗಳೊಂದಿಗೆ ಹೊಂದಿದ್ದ ನೀತಿಯನ್ನು ಈ ಮೂರು ಕಾಲಾವಧಿಗಳಾಗಿ ವರ್ಗಿಕರಿಸಿದರು.
1. ಸುತ್ತು ಬೇಲಿಯ (Ring Fence) ನೀತಿ
2. ಅಧೀನ ಪ್ರತ್ಯೇಕತೆಯ (Subordinate Isolation) ನೀತಿ 1813-1858
3. ಅಧೀನ ಐಕ್ಯತೆಯ (Subordinate Union) ನೀತಿ 1858-1919
1. ಸುತ್ತು ಬೇಲಿಯ (Ring Fence) ನೀತಿ
ಈ ಅವಧಿಯಲ್ಲಿ ಬ್ರಿಟಿಷರು ದೇಶೀಯ ಸಂಸ್ಥಾನಗಳನ್ನು ಸ್ವತಂತ್ರ ರಾಜ್ಯಗಳನ್ನಾಗಿ ಪರಿಗಣಿಸಿದರು. ತತ್ವತಃ ದೇಶೀಯ ರಾಜರ ಪಾರಸ್ಪರಿಕ ಸಂಬಂಧಗಳಲ್ಲಿ ತಾವು ಮಧ್ಯಪ್ರದೇಶ ಮಾಡುವುದಿಲ್ಲ ಎಂದು ಬ್ರಿಟಿಷರು ಘೋಷಿಸಿದ್ದರು. ಆದರೆ ಆಚರಣೆಯಲ್ಲಿ ಆ ತತ್ವಕ್ಕೆ ಅವರು ಬದ್ಧರಾಗಲಿಲ್ಲ. ಆಗ ಇನ್ನೂ ಭಾರತದಲ್ಲಿ ಬ್ರಿಟಿಷರು ಸರ್ವೋನ್ನತ ಶಕ್ತಿಯಾಗಿರಲಿಲ್ಲ. ಆ ಸ್ಥಾನವನ್ನು ಗಳಿಸಲು ಅವರು ಹೆಣಗುತ್ತಿದ್ದರು. ಆದ್ದರಿಂದ ಅವರು ಎಲ್ಲ ಕಡೆಯೂ ಮೂಗು ಹಾಯಿಸಲಾಗುತ್ತಿರಲಿಲ್ಲ ಅಥವಾ ತಮ್ಮ ಮಿತ್ರರಾದ ಅರಸರ ಮೇಲೆ ತಮ್ಮ ಪ್ರಭುತ್ವವನ್ನು ಹೇರುವಂತಿರಲಿಲ್ಲ. ಮೈಸೂರಿನ ಮೇಲೆ ಮಾಡಿದ ಯುದ್ಧಗಳು, ನಾಲ್ಕನೆಯ ಮೈಸೂರು ಯುದ್ಧವಾದ ನಂತರ ಹಿಂದೂ ರಾಜನೊಂದಿಗೆ ಮಾಡಿಕೊಂಡ ಒಪ್ಪಂದ, ಮೊದಲನೆ ಮತ್ತು ಎರಡನೆಯ ಮರಾಠಾ ಯುದ್ಧಗಳು, ಔದ್ ಮತ್ತು ಹೈದರಾಬಾದ್‌ಗಳೊಂದಿಗಿನ ಒಪ್ಪಂದಗಳು ಮತ್ತು ರಣಜಿತ್‌ಸಿಂಗನೊಂದಿಗೆ ಮಾಡಿಕೊಂಡ ಅಮೃತಸರ ಒಪ್ಪಂದ ಇವು ಈ ಕಾಲದಲ್ಲಿ ನಡೆದವು. ವೆಲ್ಲೆಸ್ಲಿಯು ಬೇರೆ ಬೇರೆ ಅರಸರೊಂದಿಗೆ ನಡೆಸಿದ ಯುದ್ಧಗಳು ಮತ್ತು ಮಾಡಿಕೊಂಡ ಸಹಾಯಕ ಸೈನ್ಯ ಕರಾರುಗಳು ಬ್ರಿಟಿಷರನ್ನು ಭಾರತದಲ್ಲಿ ಸರ್ವೋನ್ನತ ಶಕ್ತಿಯನ್ನಾಗಿ ಮಾಡಿದವು. ಅವರ ಮಿತ್ರರಾಗಿದ್ದವರು ಈಗ ಅಧೀನ ರಾಜರಾದರು. ಆದರೂ ದೇಶೀಯ ರಾಜರೊಂದಿಗೆ ಅವರ ಸಂಬಂಧಗಳನ್ನು ಪರಿಶೀಲಿಸಿ ನೋಡುವಾಗ ಈ ಎರಡು ಅಂಶಗಳು ಸ್ಪಷ್ಟವಾಗಿ ಗೋಚರವಾಗುತ್ತವೆ.
ಅ) ಮೈಸೂರಿನ ಹಿಂದೂ ಅರಸನೊಂದಿಗೆ ಮಾಡಿಕೊಂಡಿದ್ದ ಕರಾರಿನ ಹೊರತು, ಉಳಿದ ದೇಶೀಯ ಅರಸರೊಂದಿಗೆ ಮಾಡಿಕೊಂಡಿದ್ದವೆಲ್ಲವೂ ಸಮಾನತೆಯ ಮತ್ತು ಪಾರಸ್ಪರಿಕತೆಯ, ಅಂದರೆ ಕೊಟ್ಟು ತೆಗೆದುಕೊಳ್ಳುವ ಆಧಾರದ ಮೇಲೆ ಆದುವು. ಅವರೊಂದಿಗೆ ಒಪ್ಪಂದಕ್ಕೆ ಬರುವಾಗ ಬ್ರಿಟಿಷರು ತಮ್ಮ ಪ್ರಭುತ್ವವನ್ನು ಉಲ್ಲೇಖಿಸಲಿಲ್ಲ.
ಆ) ದೇಶೀಯ ಅರಸನು, ಬ್ರಿಟಿಷರೊಂದಿಗೆ ಕರಾರು ಮಾಡಿಕೊಂಡ ಮೇಲೆ, ತನ್ನ ರಾಜ್ಯದ ಆಂತರಿಕ ವ್ಯವಹಾರಗಳನ್ನು ನಿರ್ವಹಿಸಿಕೊಳ್ಳಲು ಸ್ವತಂತ್ರನಾಗಿರುತ್ತಾನೆ ಎಂದು ಪ್ರತಿಯೊಂದು ಒಪ್ಪಂದದಲ್ಲೂ ಸ್ಪಷ್ಟಪಡಿಸಿತು.
ಆದ್ದರಿಂದ ಭಾರತದಲ್ಲಿ ಬ್ರಿಟಿಷರನ್ನು ಸರ್ವೋನ್ನತ ಶಕ್ತಿಯನ್ನಾಗಿ ಮಾಡುವುದನ್ನೇ ಅಪೇಕ್ಷಿಸಿ, ಬಹುಮಟ್ಟಿಗೆ ಯಶಸ್ವಿಯಾಗದ ವೆಲ್ಲೆಸ್ಲಿಯೂ ಸಂಪೂರ್ಣ ಪ್ರಭುತ್ವವನ್ನು ಘೋಷಿಸಲಿಲ್ಲ ಮತ್ತು ಮಿತ್ರರಾಜರ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡಲು ತನಗೆ ಹಕ್ಕಿದೆ ಎಂದು ಹೇಳಲಿಲ್ಲ. ಬ್ರಿಟಿಷರು ತಮ್ಮ ಭೂಭಾಗವನ್ನು ವಿಸ್ತರಿಸಲು ಮತ್ತು ಅದನ್ನು ಸುರಕ್ಷಿತವಾಗಿರಿಸಿಕೊಳ್ಳಲು ಕಾತುರರಾಗಿದ್ದರು. ಆದ್ದರಿಂದ ಅವರು ಮೊದಲಲ್ಲಿ ತಮ್ಮ ಮಿತ್ರ ರಾಜ್ಯಗಳನ್ನು ತಮ್ಮ ಭೂ-ಪ್ರದೇಶಕ್ಕೂ ವೈರಿರಾಜನ ಭೂಪ್ರದೇಶಕ್ಕೂ ನಡುವೆ ತಡೆಯಾಗಿ ಇರಿಸಿಕೊಂಡರು. ಮುಂದೆ ಆ ರಾಜರು ಇತರರೊಂದಿಗೆ ತಮ್ಮ ವಿರುದ್ಧ ಒಂದುಗೂಡುವುದನ್ನು ತಡೆಯುವ ಸಲುವಾಗಿ ಅವರ ವಿದೇಶಾಂಗ ನೀತಿಯನ್ನು ತಮ್ಮ ಇಷ್ಟದ ಪ್ರಕಾರ ವ್ಯವಹರಿಸಲು ಪ್ರಯತ್ನ ಮಾಡಿದರು. ಅಂತಿಮವಾಗಿ ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ಕ್ರೋಡೀಕರಿಸಿ ವಿಸ್ತರಿಸಿದರು. ಹೀಗೆ ಈ ಕಾಲಾವಧಿಯಲ್ಲಿ ಬ್ರಿಟಿಷರು ಬಹುವಾಗಿ ದೇಶೀಯ ರಾಜರನ್ನು ಸ್ವತಂತ್ರ ರಾಜರನ್ನಾಗಿ ಪರಿಗಣಿಸಿ ಅದಕ್ಕೆ ತಕ್ಕಂತೆ ವರ್ತಿಸಿದರು.
2. ಅಧೀನ ಪ್ರತ್ಯೇಕತೆಯ ನೀತಿ (1813-1858)
ಬ್ರಿಟಿಷರನ್ನು ಭಾರತದಲ್ಲಿ ಪರಮೋನ್ನತ ಶಕ್ತಿಯನ್ನಾಗಿ ಬೆಳೆಸುವುದರಲ್ಲಿ ವೆಲ್ಲೆಸ್ಲಿಯು ಬಹುಮಟ್ಟಿಗೆ ಯಶಸ್ವಿಯಾದನು. ಆಗ ಉಳಿದುಕೊಂಡಿದ್ದ ಕೊರತೆಯನ್ನು ಮಾರ್ಕ್ಸಿಸ್ ಆಫ್ ಹೇಸ್ಟಿಂಗ್ಸ್ ಪೂರ್ಣಗೊಳಿಸಿದನು. ಮೂರನೆಯ ಮರಾಠಾ ಯುದ್ಧವಾದ ಮೇಲೆ ಬ್ರಿಟಿಷರ ಸಾರ್ವಭೌಮತ್ವವನ್ನು ಎದುರಿಸುವ ಧೈರ್ಯವುಳ್ಳ ಯಾವ ದೇಶೀಯ ರಾಜ್ಯ ಶಕ್ತಿಯೂ ಉಳಿಯಲಿಲ್ಲ. ಆದ್ದರಿಂದ, ಬ್ರಿಟಿಷರು ಮಿತ್ರರಾಜರ ಮೇಲೆ ಹೆಚ್ಚಿನ ಹಕ್ಕುಗಳನ್ನು ಸ್ಥಿರೀಕರಿಸಿದರು. ದೇಶೀಯ ರಾಜರು ತಮ್ಮ ವಿದೇಶಾಂಗ ನೀತಿಯನ್ನು ಸಂಪೂರ್ಣವಾಗಿ ಬ್ರಿಟಿಷರ ಕೈಗೊಪ್ಪಿಸಿದರು. ತತ್ವತಃ ಆಂತರಿಕ ವ್ಯವಹಾರಗಳಲ್ಲಿ ಅವರು ಸ್ವತಂತ್ರರಾಗಿದ್ದರೂ ಆಚರಣೆಯಲ್ಲಿ ಅವರನ್ನು ಅಧೀನರಂತೆ ನಡೆಸಿಕೊಳ್ಳಲಾಯಿತು. ಅವರ ಆಸ್ಥಾನಗಳಲ್ಲಿದ್ದ ರೆಸಿಡೆಂಟರ ಮೂಲಕ ಬ್ರಿಟಿಷರ ಮಧ್ಯ ಪ್ರವೇಶ ಅಧಿಕವಾಗುತ್ತಲೇ ಹೋಯಿತು. ಆದ್ದರಿಂದ ಮಧ್ಯಪ್ರವೇಶದ ಸ್ವರೂಪವು ರಾಜನ ವ್ಯಕ್ತಿತ್ವವನ್ನು ಅವನ ಆಸ್ಥಾನದ ಬ್ರಿಟಿಷ್ ರೆಸಿಡೆಂಟನನ್ನೂ ಅವಲಂಭಿಸಿತು. ಆದರೆ ದೇಶೀಯ ರಾಜರನ್ನು ಬ್ರಿಟಿಷರು ಸ್ವತಂತ್ರ ಅರಸರನ್ನಾಗಿ ನಡೆಸಿಕೊಳ್ಳಲಿಲ್ಲ ಎನ್ನುವುದಂತೂ ಸ್ಪಷ್ಟವಾಗಿತ್ತು. ಕ್ರಮೇಣ ಅವರನ್ನು ತಮ್ಮ ಅಧೀನರ ಮಟ್ಟಕ್ಕೆ ಇಳಿಸಲಾಯಿತು. ಔಥ್, ಮೈಸೂರು, ನಾಗಪುರ, ಉದಯಪುರ, ಜಯಪುರ, ಮೊದಲಾದ ರಾಜ್ಯಗಳ ವ್ಯವಹಾರಗಳಲ್ಲಿ ಹೀಗೆ ಬ್ರಿಟಿಷರು ಮೂಗುಹಾಯಿಸಿದರು. ಆದ್ದರಿಂದ 1813ರಿಂದ 1858ವರೆಗಿನ ಅವಧಿಯಲ್ಲಿ ದೇಶೀಯ ರಾಜರೊಂದಿಗೆ ಬ್ರಿಟಿಷರು ಇಟ್ಟುಕೊಂಡ ಸಂಬಂಧಗಳನ್ನು ಪರಿಶೀಲಿಸುವಾಗ ಕೆಳಗಿನ ಎರಡು ಅಂಶಗಳು ವಿಶೇಷವಾಗಿ ಗಮನಕ್ಕೆ ಬರುತ್ತವೆ :
1) ಬ್ರಿಟಿಷ್ ರೆಸಿಡೆಂಟರು ದೇಶೀಯರಾಜರ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡುವುದು ಅಧಿಕವಾಗುತ್ತಾ ಹೋಯಿತು. ಅವರು ಅಧಿಕವಾಗಿ ದೇಶೀಯ ರಾಜರ ಮೇಲೆ ಬಿಗಿಯಾದ ನಿಯಂತ್ರಣವನ್ನಿಟ್ಟುಕೊಂಡರು.
1) ಗವರ್ನರ್ ಜನರಲ್ಲರು ಸ್ಪಷ್ಟವಾಗಿಯೇ ಸಾಮ್ರಾಜ್ಯಶಾಹಿಗಳಾದರು. ಭಾರತದಲ್ಲಿ ಮತ್ತು ಎಷ್ಟುಸಾಧ್ಯವೋ ಅಷ್ಟರ ಮಟ್ಟಿಗೆ ಹೊರಗೆ ಕೂಡ ಬ್ರಿಟಿಷ್ ಸಾಮ್ರಾಜ್ಯವನ್ನು ವಿಸ್ತರಿಸಿದರು.
ಬ್ರಿಟಿಷರಿಗೆ ಈ ಪ್ರೇರಣೆ ಬಂದದ್ದು ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳಿಂದ ರಾಜ್ಯ ವಿಸ್ತಾರವೆನ್ನುವುದು ಅವರಿಗೆ ಆರ್ಥಿಕ ಮತ್ತು ರಾಜಕೀಯ ಲಾಭವಾಯಿತು. ಅವರಿಗೆ ಹೆಚ್ಚಿನ ಭೂಪ್ರದೇಶ, ಹೆಚ್ಚಿನ ವರಮಾನ ತಮ್ಮ ಉತ್ಪಾದನೆಗಳಿಗೆ ವಿಶಾಲವಾದ ಮಾರುಕಟ್ಟೆ, ಹೆಚ್ಚಿನ ಮಾನವಶಕ್ತಿ ಇವುಗಳನ್ನು ಕೊಟ್ಟಿತು, ಜೊತೆಗೆ ಅದೇ ಸಮಯಕ್ಕೆ ಅವರ ವೈರಿಗಳು ದುರ್ಬಲರಾಗುತ್ತಾ ಹೋದರು. ದೇಶೀಯ ರಾಜರ ರಾಜ್ಯಗಳನ್ನು ಕಬಳಿಸಲು ಅವರು ಕೊಟ್ಟ ಒಂದು ನೆಪ, ಅದು ಜನರನ್ನು ರಾಜರ ದುರಾಡಳಿತದಿಂದ ಕಾಪಾಡುತ್ತದೆ ಎನ್ನುವುದು, ಬ್ರಿಟಿಷ್ ಆಳ್ವಿಕೆಯಿಂದ ಅವರಿಗೆ ಬೇಕಾದಷ್ಟು ಪ್ರಯೋಜನವಾಗುತ್ತದೆ ಎಂದು ಹೇಳಿದುದು. ಆದರೆ ಬ್ರಿಟಿಷರ ಈ ನಿಲುವು ಎಷ್ಟು ಮಾತ್ರಕ್ಕೂ ಸಮರ್ಥನೀಯವಾಗಿರಲಿಲ್ಲ. ಬ್ರಿಟಿಷ್ ಆಳ್ವಿಕೆಯು ಜನರಿಗೆ ಪ್ರಯೋಜಕರವಾಗಿತ್ತೇ ಎನ್ನುವುದು ಚರ್ಚಾಸ್ಪದವಾದ ವಿಷಯ. ಅಲ್ಲದೆ ದೇಶೀಯ ರಾಜರ ದುರಾಡಳಿತಕ್ಕೂ ಬ್ರಿಟಿಷರೇ ಜವಾಬ್ದಾರರಾಗಿದ್ದರು. ಅವರ ದುರಾಡಳಿತಕ್ಕೆ ಒಂದು ಕಾರಣ ಬ್ರಿಟಿಷ್ ರೆಸಿಡೆಂಟರ ಮಧ್ಯಪ್ರವೇಶ. ಆಡಳಿತವು ಸುಧಾರಣೆಗೊಳ್ಳಲು ಅವರು ಬಿಡಲಿಲ್ಲ. ಅವರ ರಾಜ್ಯವನ್ನು ಒತ್ತುವರಿ ಮಾಡಿಕೊಳ್ಳಲು ಅವರು ನೆಪವನ್ನು ಹುಡುಕುತ್ತಿದ್ದರು. ಮಿ|| ಹೆನ್ರಿ ಲಾರೆನ್ಸ್ ಇದನ್ನು ಒಪ್ಪಿಕೊಂಡನು. ಅವನು 1848ರಲ್ಲಿ ಹೀಗೆ ಅಭಿಪ್ರಾಯಪಟ್ಟಿದ್ದಾನೆ : “ಕೆಟ್ಟ ಆಡಳಿತದ ಎದುರಾಗಿ ಭರವಸೆ ಕೊಡಲು ಯಾವುದಾದರೂ ಸಾಧನವಿದ್ದರೆ ಅದು ದೇಶೀಯ ರಾಜ ಮತ್ತು ಅವನ ಮಂತ್ರಿ. ಇಬ್ಬರೂ ವಿದೇಶೀಯ ಬಂದೂಕಿನ ತುದಿಯನ್ನು ಅವಲಂಬಿಸಿ, ಬ್ರಿಟಿಷ್ ರೆಸಿಡೆಂಟನಿಂದ ಮಾರ್ಗ ದರ್ಶನ ಪಡೆದರು". ಡೈರೆಕ್ಟರುಗಳ ಮಂಡಳಿಯು 1841ರಲ್ಲಿ ಈ ಸಾಮ್ರಾಜ್ಯಶಾಹಿ ನೀತಿಯನ್ನು ಅಂಗೀಕರಿಸಿತು. "ನ್ಯಾಯಯುತವೂ ಗೌರವಾನ್ವಿತವೂ ಆದ ರೀತಿಯಲ್ಲಿ ಭೂಪ್ರದೇಶವನ್ನಾಗಲಿ ವರಮಾನವನ್ನಾಗಲಿ ವಶಪಡಿಸಿಕೊಳ್ಳುವುದನ್ನು ಬಿಡಲಾಗದು -" ಎಂದು ಅವರು ಪ್ರಕಟಿಸಿದರು. ಈ ನೀತಿಯು ಲಾರ್ಡ್ ಡಾಲ್ ಹೌಸಿಯು ಗವರ್ನರ್ ಜನರಲ್ ಆದಾಗ ಶಿಖರ ಮುಟ್ಟಿತು.
ವಾಸ್ತವವಾಗಿ ಅಧೀನ ದೇಶೀಯ ರಾಜರ ರಾಜ್ಯಗಳನ್ನು ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವ ನೀತಿಯನ್ನು ಬ್ರಿಟಿಷರು 1831ರಿಂದಲೇ ಅನುಸರಿಸುತ್ತಿದ್ದರು. ಬೇರೆ ಬೇರೆ ಗವರ್ನ‌್ರಜನರಲ್ಲರು ಬೇರೆ ಬೇರೆ ನೆಪಗಳಿಂದ ದೇಶೀಯ ರಾಜರ ಭೂಭಾಗಗಳನ್ನು ಕಬಳಿಸುತ್ತಿದ್ದರು. ಸಿಂಥ್, ಪಂಜಾಬ್, ಬರ್ಮಾ ಮತ್ತು ಅಸ್ಸಾಂ ಇವು ಯುದ್ಧದ ಫಲಾವಾಗಿ ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನವಾದುವು. ಚಚಾರ್, ಮೈಸೂರು, ಕೊಡಗು, ಮಣಿಪುರ ಮತ್ತು ಜೈಂತಿಯಾಗಳನ್ನು ದುರಾಡಳಿತ ಎಂಬ ಹೆಸರಿನಲ್ಲಿ ವಶಪಡಿಸಿಕೊಳ್ಳಲಾಯಿತು. ಕರ್ನೂಲನ್ನು ಲಾರ್ಡ್ ಆಕ್ಲಂಡನು 1842ರಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. 1843ರಲ್ಲಿ ಲಾರ್ಡ್ ಎಲೆನ್‌ಬರೋ ಗ್ವಾಲಿಯರ್ ಸಂಸ್ಥಾನದ ವ್ಯವಹಾರಗಳಲ್ಲಿ ತಲೆಹಾಕಿದನು. ಅದನ್ನು ಒಡನೆಯೇ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳಲಿಲ್ಲವಾದರೂ ಅಲ್ಲಿಯ ಅರಸನೊಂದಿಗೆ ಹೊಸ ಒಪ್ಪಂದವೊಂದನ್ನು ಮಾಡಿಕೊಳ್ಳಲಾಯಿತು. ಅದರ ಪ್ರಕಾರ ರಾಜ್ಯದ ಸೇನಾ ಬಲವನ್ನು ಕುಗ್ಗಿಸಿ ಅದನ್ನು ಸಂರಕ್ಷಿತ ರಾಜ್ಯವೆಂದು ಘೋಷಿಸಲಾಯಿತು. 1839ರಲ್ಲಿ ಮಾಂಡವಿ, 1840ರಲ್ಲಿ ಕೊಲಾಬಾ ಮತ್ತು ಜಲೋನ್, 1842ರಲ್ಲಿ ಸೂರತ್‌ಗಳನ್ನು ಅಲ್ಲಲ್ಲಿಯ ಅರಸರಿಗೆ ವಾರಸುದಾರರಿರಲಿಲ್ಲವೆಂಬ ಕಾರಣದಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳಲಾಯಿತು. ಈ "ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಸಿದ್ಧಾಂತದ ನೀತಿಯನ್ನು ಡಾಲ್‌ಹೌಸಿಯು ಹೆಚ್ಚು. ಬಿರುಸಾಗಿ ಅನುಸರಿಸಿದನು. ಈ ನೀತಿಯ ಆಧಾರದಿಂದ ಅವನು ಸತಾರವನ್ನು 1848ರಲ್ಲೂ: ಜೈತ್‌ಪುರ, ಸಂಭಲ್ಪುರ ಮತ್ತು ಬೈಘಾಟ್ ಗಳನ್ನು 1850ರಲ್ಲೂ; ಉದಯಪುರವನ್ನು 1852ರಲ್ಲೂ, ಝಾನ್ಸಿಯನ್ನು 1853ರಲ್ಲೂ ಮತ್ತು ನಾಗಪುರವನ್ನು 1854ರಲ್ಲೂ ಸಾಮ್ರಾಜ್ಯಕ್ಕೆ ಸೇರಿಸಿದನು. ಯಾವ ರಾಜ್ಯಗಳು ಬ್ರಿಟಿಷರಿಂದಾಗಿಯೇ ಅಸ್ತಿತ್ವದಲ್ಲಿವೆಯೋ ಅಂಥವುಗಳಲ್ಲಿ ಮಾತ್ರ ತಾನು ಈ ನೀತಿಯನ್ನು ಅನುಸರಿಸುತ್ತಿದ್ದುದಾಗಿ ಡಾಲ್‌ಹೌಸಿ ಹೇಳಿಕೊಂಡನು.
“ನಮ್ಮ ಧನಸಹಾಯ ಅಥವಾ ಕೊಡುಗೆಯಿಂದಾಗಿ ಅಸ್ತಿತ್ವದಲ್ಲಿರುವ ರಾಜ್ಯಗಳಲ್ಲಿ ವಾರಸುದಾರರಿಲ್ಲದೆ ಹೋದಾಗ, ನಮ್ಮ ಸಹಾಯದ ಷರತ್ತಿನಂತೆ ಆ ರಾಜ್ಯವನ್ನು ನಾವು ಆಕ್ರಮಣ ಮಾಡಿಕೊಳ್ಳುತ್ತೇವೆ" ಎಂದು ಅವನು ಹೇಳಿದನು. ಈ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಸಿದ್ಧಾಂತದ ನೀತಿಯೇ ಅನ್ಯಾಯದ್ದಾಗಿತ್ತು. ಒಬ್ಬ ದೇಶೀಯ ಅರಸನಿಗೆ ಮಕ್ಕಳಿಲ್ಲದಾಗ ಒಂದು ಮಗುವನ್ನು ದತ್ತಕ ಸ್ವೀಕಾರ ಮಾಡುವುದು ಅವನ ಹಕ್ಕು ಎಂಬುದಕ್ಕೆ ಸಾಮಾಜಿಕ ಹಾಗೂ ಧಾರ್ಮಿಕ ಅಂಗೀಕಾರ, ಮನ್ನಣೆಗಳಿದ್ದುವು. ಮೊಗಲ್ ಚಕ್ರವರ್ತಿಗಳೂ ದೇಶದ ಇತರ ಎಲ್ಲಾ ರಾಜಮಹಾರಾಜರುಗಳೂ ಇದನ್ನು ಒಪ್ಪಿದ್ದರು. ಇಂತಹ ಸರ್ವಸಮ್ಮತ ನೀತಿಯನ್ನು ತಿರಸ್ಕರಿಸಿ ರಾಜನು ದತ್ತಕ ಸ್ವೀಕಾರ ಮಾಡುವುದನ್ನೂ ಅನುಮತಿಸದಿರುವುದಕ್ಕೆ ಬ್ರಿಟಿಷರಿಗೆ ನ್ಯಾಯವಾದ ಅಧಿಕಾರವಾಗಲಿ ಕಾರಣವಾಗಲಿ ಇರಲಿಲ್ಲ. ಡಾಲ್‌ಹೌಸಿಯ ಉದ್ದೇಶ ಸಂಪೂರ್ಣವಾಗಿ ಸಾಮ್ರಾಜ್ಯ ಶಾಹಿಯಾಗಿತ್ತು. ಮಿ|| ಇನ್ಸ್ ತಿಳಿಸುವಂತೆ "ರಾಜ್ಯವೊಂದನ್ನು ವಶಪಡಿಸಿಕೊಳ್ಳುವುದನ್ನು ನಿವಾರಿಸಲು ಸಾಧ್ಯವಿದ್ದರೆ ನಿವಾರಿಸಬೇಕು ಎಂಬ ನೀತಿಯನ್ನು ಅವನ ಹಿಂದಿನವರು ಪಾಲಿಸುತ್ತಿದ್ದರು. ಆದರೆ ಡಾಲ್ ಹೌಸಿಯು, ನ್ಯಾಯಸಮ್ಮತವಾದ ರೀತಿಯಲ್ಲಿ ವಶಪಡಿಸಿಕೊಳ್ಳುವುದು ಸಾಧ್ಯವಿದ್ದರೆ ವಶಪಡಿಸಿಕೊಳ್ಳಬೇಕು ಎಂಬ ನೀತಿಯನ್ನು ಅನುಸರಿಸಿದನು. ಸತಾರಾ ಮತ್ತು ನಾಗಪುರಗಳನ್ನು ವಶಪಡಿಸಿಕೊಂಡದ್ದನ್ನು ಕುರಿತು ಲೀ ವಾರ್ನರ್ ಕೂಡ ಹೀಗೆ ಹೇಳುತ್ತಾನೆ : "ಸಾಮ್ರಾಜ್ಯದ ಹಿತಗಳು ಅವನಿಗೆ ಹೆಚ್ಚು ತೂಕವಾಗಿ ಕಾಣಿಸಿದವು... ಅವು ಇದ್ದುದ್ದು ಮುಂಬಯಿ - ಮದರಾಸು ನಡುವಣ ಮುಖ್ಯ ಮಾರ್ಗದ ಹಾಗೂ ಮುಂಬಯಿ - ಕಲ್ಕತ್ತಾ ನಡುವಣ ಮುಖ್ಯ ಮಾರ್ಗದ ನಡುವೆ ಹಾಗಾಗಿ ಅವುಗಳನ್ನು ವಶಪಡಿಸಿಕೊಂಡುದರಿಂದ ಕ್ರೋಡೀಕರಣ ಸಾಧ್ಯವಾಗುತ್ತಿತ್ತು. ಡಾಲ್‌ಹೌಸಿಯ ಈ ನೀತಿಗೆ ಕಂಪೆನಿಯ ಡೈರೆಕ್ಟರುಗಳ ಸಕ್ರಿಯ ಬೆಂಬಲ ದೊರಕಿತು. ಡಾಲ್ ಹೌಸಿ ಒಂದೊಂದು ರಾಜ್ಯವನ್ನು ವಶಪಡಿಸಿಕೊಂಡುದನ್ನೂ ಅವರು ಸಮ್ಮತಿಸಿದರು. ಮುಂದೆ ಅವನು 1850ರಲ್ಲಿ ಸಿಕ್ಕಿಂ ರಾಜ್ಯಕ್ಕೆ ಸೇರಿದ ಒಂದು ಸಾವಿರದ ಆರುನೂರ ಎಪ್ಪತ್ತಾರು ಚದರ ಮೈಲಿಯಷ್ಟು ಪ್ರದೇಶವನ್ನೂ : 1853ರಲ್ಲಿ ಹೈದರಾಬಾದಿನ ನಿಜಾಮನಿಂದ ಬೀರಾರ್ ಪ್ರಾಂತ್ಯವನ್ನು ; 1856ರಲ್ಲಿ ಔಥ್ ರಾಜ್ಯವನ್ನೂ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ಇದೇ ನೀತಿಯನ್ನೇ ಬ್ರಿಟಿಷರು 1813ರಿಂದ 1858ರ ಅವಧಿಯಲ್ಲಿ ಮುಂದುವರಿಸಿದರು. ದೇಶೀಯ ಅರಸರು ಅಧೀನ ಮಿತ್ರರೇ ಹೊರತು ಸ್ವತಂತ್ರ ಅರಸರಲ್ಲ ಎಂಬ ಧೋರಣೆಯಿಂದ ಅವರು ಹಾಗೆ ಮಾಡಿದರು. ಆದರೆ ಅದು ನ್ಯಾಯವಾದ ನೀತಿಯಾಗಿರಲಿಲ್ಲ. ಈ ನೀತಿಯ ಮೂಲ ಆಧಾರ ಬಲತ್ಕಾರ, ಬ್ರಿಟಿಷರು ಭಾರತದಲ್ಲಿ ಅತ್ಯಂತ ಪ್ರಬಲ ಶಕ್ತಿಯಾಗಿದ್ದರು. ಅವರನ್ನು ಎದುರಿಸುವ ಶಕ್ತಿ ದೇಶೀಯ ರಾಜರಿಗಿರಲಿಲ್ಲ. ಆದ್ದರಿಂದ ಸಿಕ್ಕಿದ ನೆಪಗಳೆಲ್ಲವನ್ನೂ ಉಪಯೋಗಿಸಿಕೊಂಡು ಬ್ರಿಟಿಷರು ತಮ್ಮ ಸಾಮ್ರಾಜ್ಯಶಾಹಿ ಉದ್ದೇಶಗಳನ್ನು ಪೂರೈಸಿಕೊಂಡರು. ಬೇರೆ ಯಾವುದೇ ಸುಲಭವಾದ ನೆಪ ದೊರಕದಾದಾಗ ಯುದ್ಧ ಮಾಡಿ ಗೆದ್ದು ಕೊಳ್ಳಲೂ ಅವರು ಹಿಂಜರಿಯಲಿಲ್ಲ. ಹಾಗಾಗಿ ದೇಶೀಯ ರಾಜರನ್ನು ಕುರಿತ ನೀತಿಯ ಈ ಪರಿವರ್ತನೆಯ ಮುಖ್ಯ ಕಾರಣ, ಭಾರತದಲ್ಲಿ ಕ್ರಮೇಣ ಅಧಿಕವಾಗುತ್ತಿದ್ದ ಅವರ ರಾಜಕೀಯ ಶಕ್ತಿ.
3. ಅಧೀನ ಒಕ್ಕೂಟದ ನೀತಿ (1858-1919)
ದೇಶೀಯ ಸಂಸ್ಥಾನಗಳನ್ನು ಕುರಿತ ಬ್ರಿಟಿಷರ ನೀತಿಯಲ್ಲಿ 1857ರ ದಂಗೆಯ ನಂತರ ಮೂಲಭೂತ ಬದಲಾವಣೆಗಳಾದವು. ಬಹುತೇಕ ರಾಜಮಹಾರಾಜರು ಪ್ರತ್ಯಕ್ಷವಾಗೋ ಪರೋಕವಾಗೋ ಬ್ರಿಟಿಷರನ್ನು ಬೆಂಬಲಿಸಿದರು. ಅದಕ್ಕೆ ಪ್ರತಿಯಾಗಿ ಬ್ರಿಟಿಷರು ಅವರಿಗೆ ಗೌರವವನ್ನೂ ಅವರ ರಾಜ್ಯವನ್ನೂ ಕೊಟ್ಟರು. 1858ರಲ್ಲಿ ಬ್ರಿಟಿಷ್ ಚಕ್ರವರ್ತಿಯು ಭಾರತದ ಆಡಳಿತವನ್ನು ಕಂಪೆನಿಯಿಂದ ತೆಗೆದುಕೊಂಡನು. ಭಾರತದ ದೇಶೀಯ ರಾಜರಿಗೆ ಹಲವು ರಿಯಾಯತಿಗಳನ್ನು ಪ್ರಕಟಿಸಿದನು. ಅದುವರೆಗೆ ಕಂಪೆನಿಯು ಮಾಡಿಕೊಂಡಿದ್ದ ಕರಾರುಗಳು, ಒಪ್ಪಂದಗಳು, ಸನ್ನದುಗಳು, ಹಕ್ಕುಗಳು ಎಲ್ಲವನ್ನೂ ಬ್ರಿಟಿಷ್ ಸರಕಾರವು ಆಂಗೀಕರಿಸಿತು. ಸಹಜವಾದ ವಾರಸುದಾರನಿಲ್ಲದಾಗ ದತ್ತಕ ಸ್ವೀಕಾರ ಮಾಡುವ ರಾಜರ ಹಕ್ಕನ್ನು ಆಡಳಿತವು ಒಪ್ಪಿಕೊಂಡಿತು. ಅದಕ್ಕಿಂತ ಮಿಗಿಲಾಗಿ ದೇಶೀಯ ರಾಜ್ಯಗಳಿರುವುದು, ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯದ ಭದ್ರತೆಗೆ ಉಪಯುಕ್ತವೆಂದು ಕಂಡುಬಂದುದರಿಂದ, ಅವರ ರಾಜ್ಯಗಳನ್ನು ವಶಪಡಿಸಿಕೊಳ್ಳುವ ವಿಚಾರವನ್ನು ಸಂಪೂರ್ಣವಾಗಿ ಕೈಬಿಡಲಾಯಿತು. ದುರಾಡಳಿತ ನಡೆಸುತ್ತಿರುವ ರಾಜನನ್ನು ಶಿಕ್ಷಿಸುವುದು ಮತ್ತು ಅಗತ್ಯವಾದರೆ ಅವನನ್ನು ಪದಚ್ಯುತಗೊಳಿಸುವುದು, ಆದರೆ ರಾಜ್ಯವನ್ನು ತಮ್ಮ ವಶಪಡಿಸಿಕೊಳ್ಳದಿರುವುದು ನೂತನ ನೀತಿಯಾಯಿತು. ಚಕ್ರವರ್ತಿನಿಯ ಘೋಷಣೆಯೂ 'ದೇಶೀಯ ರಾಜರ ಹಕ್ಕುಗಳು, ಗೌರವ, ಪ್ರತಿಷ್ಠೆಗಳನ್ನು ಗೌರವಿಸುವುದಾಗಿ ಭರವಸೆ ನೀಡಿತು. ಹಾಗಾಗಿ 1857ರ ನಂತರ ದೇಶೀಯ ರಾಜರು ತಮಗೆ ಹೆಚ್ಚಿನ ಗೌರವವೂ ಸುರಕ್ಷಣೆಯೂ ದೊರೆತಂತೆ ಭಾವಿಸಿದರು. ಕಂಪೆನಿಗೆ ಬದಲಾಗಿ ಬ್ರಿಟಿಷ್ ಸಾಮ್ರಾಜ್ಯವು ಇಲ್ಲಿ ಸರ್ವೋನ್ನತ ಶಕ್ತಿಯಾದದ್ದು ಹೊರತಾಗಿ, ದೇಶೀಯ ರಾಜರ ಸ್ಥಾನಮಾನದಲ್ಲಿ ಯಾವುದೇ ನ್ಯಾಯಿಕ ವ್ಯತ್ಯಾಸವಾಗಲಿಲ್ಲ.
ಆದರೆ ಆಚರಣೆಯಲ್ಲಿ ಭಾರತದ ಆಡಳಿತವನ್ನು ಚಕ್ರವರ್ತಿಯು ವಹಿಸಿಕೊಂಡದ್ದು, ದೇಶೀಯ ರಾಜ್ಯಗಳಿಗೂ ಬ್ರಿಟಿಷರಿಗೂ ಇದ್ದ ಇಡೀ ಸಂಬಂಧವನ್ನು ಕ್ರಮೇಣಿ ಬದಲಾಯಿಸಿತು. ಚಕ್ರವರ್ತಿಯೇ ಭಾರತದಲ್ಲಿ ಸರ್ವೋನ್ನತ ಶಕ್ತಿ, ದೇಶೀಯ ರಾಜರೆಲ್ಲರೂ ಅದಕ್ಕೆ ಅಧೀನರು ಎಂಬುದನ್ನು ತತ್ವದಲ್ಲೂ ಆಚರಣೆಯಲ್ಲೂ ಸ್ಥಿರೀಕರಿಸಲಾಯಿತು. 1862ರಲ್ಲಿ, ಲಾರ್ಡ್ ಕ್ಯಾನಿಂಗ್ ಹೀಗೆ ಘೋಷಿಸಿದನು. “ಬ್ರಿಟಿಷ್ ಚಕ್ರವರ್ತಿಯು ಭಾರತದ ನಿರ್ವಿವಾದ ಸರ್ವೋನ್ನತ ಅಧಿಪತಿಯಾಗಿದ್ದಾರೆ". ಮುಂದೆ ಅನುಸರಿಸಲಾದ ನೀತಿಯು ಭಾರತದ ಬ್ರಿಟಿಷ್ ಸಾಮ್ರಾಜ್ಯದ ಗಡಿಗಳೊಳಗೆ ದೇಶೀಯ ರಾಜ್ಯಗಳಿಗೆ ಮನ್ನಣೆ ನೀಡುವುದು. ಅಂದರೆ, ದೇಶೀಯ ರಾಜ್ಯಗಳು ವಿದೇಶೀಯವೂ ಅಲ್ಲದೆ, ಸ್ವತಂತ್ರವೂ ಅಲ್ಲದೆ, ಭಾರತದ ಬ್ರಿಟಿಷ್ ಸಾಮ್ರಾಜ್ಯದ ಭಾಗಗಳಾದವು. 1857ರಲ್ಲಿ ಪ್ರಿನ್ಸ್ ಆಫ್ ವೇಲ್ಸ್ ಭಾರತಕ್ಕೆ ಭೇಟಿ ನೀಡಿದನು, 1876ರಲ್ಲಿ ದೆಹಲಿ ದರ್ಬಾರು ನಡೆಯಿತು. ಅಲ್ಲಿ ಭಾರತದ ಚಕ್ರವರ್ತಿನಿ ವಿಕ್ಟೋರಿಯ ಮಹಾರಾಣಿಯು ಆ ಹಕ್ಕನ್ನು ಸ್ಥಿರೀಕರಿಸಿದಳು.
ಭಾರತ ಸರ್ಕಾರವು 'ಏಕಾಧಿಕಾರ ತತ್ವ' ವನ್ನು ಸಮರ್ಥಿಸಿತು. ಅಂದರೆ, ಅಖಿಲ ಭಾರತ ಉದ್ದೇಶಗಳಿಗಾಗಿ, ದೇಶೀಯ ರಾಜ್ಯಗಳನ್ನು ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯದ ಭಾಗಗಳನ್ನಾಗಿ ಪರಿಗಣಿಸಲಾಯಿತು. ರೈಲ್ವೆ, ಟೆಲಿಗ್ರಾಫ್ ಮತ್ತು ಅಂಚೆ ವ್ಯವಸ್ಥೆಗಳನ್ನು ಅಖಿಲ ಭಾರತ ಮಟ್ಟದಲ್ಲಿ ಕೈಗೊಳ್ಳಲಾಯಿತು. ಸಾರಿಗೆ ಮತ್ತು ಸಂಪರ್ಕ ಉದ್ದೇಶಗಳಿಗಾಗಿ ಭಾರತೀಯ ಗಡಿಗಳನ್ನು ಕೂಡಿಸಲಾಯಿತು. ಅದಕ್ಕೋಸ್ಕರವಾಗಿ ದೇಶೀಯ ರಾಜ್ಯಗಳ ಗಡಿಗಳನ್ನು ಧಾರಾಳವಾಗಿ ಅನಿರ್ಬಂಧಿತವಾಗಿ ಅತಿಕ್ರಮಿಸಲಾಯಿತು. ಭಾರತದ ಎಲ್ಲಾ ಭಾಗಗಳಲ್ಲೂ ದೇಶೀಯ ಸಂಸ್ಥಾನ ಗಳಲ್ಲೂ ಬ್ರಿಟಿಷ್ ಕರೆನ್ಸಿ ಶಾಸನಬದ್ಧವಾಗಿ ಚಲಾವಣೆಗೆ ಬಂದಿತು. ಬ್ರಿಟಿಷ್ ಪ್ರಾಂತ್ಯಗಳಲ್ಲಿ ಸ್ಥಾಪಿತವಾದ ವಿಶ್ವವಿದ್ಯಾನಿಲಯಗಳು ಬಂದ ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿಯನ್ನೂ ಅವನ/ಅವಳ ಮನೆ ಎಲ್ಲೇ ಇರಲಿ ಸೇರಿಸಿಕೊಂಡವು. ಬ್ರಿಟಿಷ್ ಉಚ್ಚ ನ್ಯಾಯಾಲಯಗಳು ದೇಶೀಯ ರಾಜರ ನ್ಯಾಯಸ್ಥಾನಗಳಿಗೆ ಮಾದರಿಯಾದುವು. ಮಂತ್ರಿಗಳನ್ನು, ಉನ್ನತ ಅಧಿಕಾರಿಗಳನ್ನು ದಿವಾನರನ್ನು, ನೇಮಿಸಿಕೊಳ್ಳಬೇಕಾದರೆ ರಾಜರು ಅದಕ್ಕೆ ಭಾರತ ಸರ್ಕಾರದ ಅಂಗೀಕಾರವನ್ನು ಪಡೆಯಬೇಕಾಯಿತು. ರಾಜನು ಅಪ್ರಪ್ತವಯಸ್ಕನಾಗಿದ್ದರೆ, ರೀಜೆಂಟ್‌ನನ್ನೊಳಗೊಂಡ ರೀಜೆನ್ಸಿ ಮಂಡಳಿಯನ್ನು ನೇಮಿಸುವುದಕ್ಕೂ, ಅಗತ್ಯವೆಂದು ಕಂಡುಬಂದರೆ ಯಾವುದೇ ರಾಜ್ಯದ ಆಡಳಿತವನ್ನು ತಾನೇ ನಿರ್ವಹಿಸುವುದಕ್ಕೆ ಸರ್ಕಾರಕ್ಕೆ ಹಕ್ಕಿದ್ದಿತು. ದೇಶೀಯ ರಾಜರು ಯಾವುದೇ ಮುಖ್ಯ ಕಾನೂನು ರಚಿಸಬೇಕಾದರ ಅದಕ್ಕೆ ಭಾರತ ಸರ್ಕಾರದ ಪೂರ್ವಾನುಮತಿಯನ್ನು ಪಡೆಯಬೇಕೆಂದು ಹೇಳಲಾಯಿತು. ಹೀಗೆ ದೇಶೀಯ ಅರಸರು ಭಾರತ ಸರಕಾರಕ್ಕೆ ಸಂಪೂರ್ಣವಾಗಿ ಅಧೀನರಾದರು, ದೇಶೀಯ ರಾಜ್ಯಗಳ ಮಹತ್ವದ ವಿಚಾರಗಳಲ್ಲಿ ಬ್ರಿಟಿಷರೇ ಅಂತಿಮ ಅಧಿಕಾರ ಎನ್ನುವುದು ಸ್ಪಷ್ಟವಾಯಿತು.
ಬ್ರಿಟಿಷರು ಭಾರತದ ಐಕ್ಯತೆಯನ್ನು ಒಪ್ಪಿದುದು ಅವರ ಜವಾಬ್ದಾರಿಯನ್ನೂ ಭಾರತೀಯ ರಾಜ್ಯಗಳ ಬಗೆಗೆ ಅವರ ಹಕ್ಕುಗಳನ್ನೂ ಹೆಚ್ಚಿಸಿತು. ಯಾವುದೇ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ರಾಜನನ್ನು ಅಧಿಕಾರದಿಂದ ತೆಗೆದುಹಾಕುವ ಹಕ್ಕು ಭಾರತ ಸರ್ಕಾರಕ್ಕಿದೆ, ಆದ್ದರಿಂದ ಎಲ್ಲಾ ರಾಜರೂ ತಮ್ಮ ಆಡಳಿತವನ್ನು ಉತ್ತಮವಾದ ರೀತಿಯಲ್ಲಿ ನಿರ್ವಹಿಸತಕ್ಕದ್ದು ಎಂದು 1860ರಲ್ಲಿ ಲಾರ್ಡ್ ಕ್ಯಾನಿಂಗ್ ದೃಢವಾಗಿ ಹೇಳಿದನು. ರಜಪೂತ ಅರಸರಿಗೆ ಇದನ್ನು ವಿವರಿಸಿ ಅವನು ಹೀಗೆ ನುಡಿದನು : "ನಾವು ನಿಮ್ಮ ಹಕ್ಕುಬಾಧ್ಯತೆಗಳನ್ನು ಪುರಸ್ಕರಿಸಬೇಕೆಂದಾದರೆ ನೀವೂ ನಿಮ್ಮ ಕಾಳಜಿಯಲ್ಲಿ ಯಾರನ್ನು ಇರಿಸಲಾಗಿದೆಯೋ ಆ ಜನತೆಯ ಹಕ್ಕು-ಬಾಧ್ಯತೆಗಳನ್ನೂ ಪುರಸ್ಕರಿಸತಕ್ಕದ್ದು. ನೀವು ಅಧಿಕಾರದಲ್ಲಿ ರಲು ನಾವು ಬೆಂಬಲ ಕೊಡುವುದಾದರೆ, ಅದಕ್ಕೆ ಪ್ರತಿಯಾಗಿ ಉತ್ತಮ ಆಡಳಿತವನ್ನು ನಾವು ನಿರೀಕ್ಷಿಸುತ್ತವೆ. ಇದು ದೇಶೀಯ ರಾಜರ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡುವ ಸಂಪೂರ್ಣ ಹಕ್ಕನ್ನು ಬ್ರಿಟಿಷರಿಗೆ ನೀಡಿತು.
ಬ್ರಿಟಿಷರಿಗೆ ದೇಶೀಯ ರಾಜ್ಯಗಳೊಂದಿಗೆ ಇದ್ದ ಸಂಬಂಧವನ್ನು ಕುರಿತು ಲಾರ್ಡ್ ಮೇಯೋ ಈ ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿದನು :
1) ದುರಾಡಳಿತದ ಸಂದರ್ಭದಲ್ಲಿ ದೇಶೀಯ ರಾಜ್ಯವೊಂದರ ಆಂತರಿಕ ವ್ಯವಹಾರಗಳಲ್ಲಿ ಮಧ್ಯೆ ಪ್ರವೇಶಿಸಲು ಬ್ರಿಟಿಷರಿಗೆ ಸಂಪೂರ್ಣವಾದ ಹಕ್ಕುಗಳಿದ್ದವು.
ii) ದೇಶೀಯ ಅರಸನೊಬ್ಬನ ವಿರುದ್ಧ ದಂಗೆಯಾದಾಗ ಬ್ರಿಟಿಷರು ಅದನ್ನು ಅಡಗಿಸುವರು.
ii) ಯಾವುದೇ ದೇಶೀಯ ರಾಜ್ಯದಲ್ಲೂ ಯಾವುದೇ ಸಂದರ್ಭದಲ್ಲೂ ದಂಗೆ ಸಂಭವಿಸಲು ಬ್ರಿಟಿಷರು ಅವಕಾಶ ಕೊಡುವುದಿಲ್ಲ.
ಹೀಗೆ ಬ್ರಿಟಿಷರು ತಮಗೆ ಇಚ್ಛೆ ಬಂದಾಗ ಯಾವುದೇ ದೇಶೀಯ ರಾಜ್ಯದ ವ್ಯವಹಾರಗಳಲ್ಲಿ ಪ್ರವೇಶಿಸುವ ಹಕ್ಕನ್ನು ಇರಿಸಿಕೊಂಡರು. ಅದನ್ನು ಆಚರಣೆಯಲ್ಲೂ ಜಾರಿಗೆ ತಂದರು. ಅಂತಹ ಅನೇಕ ಸಂದರ್ಭಗಳು ಘಟಿಸಿದುವು. ಹಾಗೆ ಬ್ರಿಟಿಷರು ದೇಶೀಯ ರಾಜರ ಮೇಲೆ ಸಾರ್ವಭೌಮತ್ವದ ಹಕ್ಕನ್ನು ಸಕ್ರಿಯವಾಗಿ ಸ್ಥಿರೀಕರಿಸಿದ ಕೆಲವು ನಿದರ್ಶನಗಳು ಹೀಗಿವೆ :
ಬರೋಡಾದ ರಾಜ ಮಲ್ದಾರರಾವ್ ಮೇಲೆ ಬ್ರಿಟಿಷರು ದುರಾಡಳಿತದ ಆರೋಪ ಹೊರಿಸಿದರು. ಆರೋಪಗಳನ್ನು ಪರಿಶೀಲಿಸಿ ಸುಧಾರಣೆಗೆ ತಕ್ಕ ಕ್ರಮಗಳನ್ನು ಸೂಚಿಸುವ ಸಲುವಾಗಿ ತ್ರಿ- ಸದಸ್ಯ ಆಯೋಗವೊಂದನ್ನು ನೇಮಿಸಿದರು. ಒಂದು ವರ್ಷದ ಅನಂತರ ಬ್ರಿಟಿಷ್ ರೆಸಿಡೆಂಟನಿಗೆ ವಿಷಹಾಕಿ ಕೊಲ್ಲಲು ಪ್ರಯತ್ನಿಸಿದನೆಂಬ ಆರೋಪದ ಮೇಲೆ ಅವನನ್ನು 1875 ಜನವರಿ 13ರಂದು ಬಂಧಿಸಲಾಯಿತು. ಅವನ ಮೇಲಿನ ಮೊಕದ್ದಮೆಯನ್ನು ವಿಚಾರಣೆ ನಡೆಸಿ ತೀರ್ಪು ಕೊಡಲು ಒಂದು ವಿಶೇಷ ನ್ಯಾಯಾಂಗ ಮಂಡಳಿಯನ್ನು ನೇಮಿಸಲಾಯಿತು. ಅದರಲ್ಲಿ ಮೂರು ಜನ ಬ್ರಿಟಿಷ್ ನ್ಯಾಯಮೂರ್ತಿಗಳೂ, ಮೂರು ಜನ ಭಾರತೀಯ ನ್ಯಾಯಾಧೀಶರೂ ಇದ್ದರು. ಭಾರತೀಯ ನ್ಯಾಯಾದೀಶರುಗಳೆಂದರೆ ಸಿಂಧಿಯ, ಜೈಪುರದ ರಾಜ ಮತ್ತು ಸರ್ ದಿನಕರರಾವ್, ಭಾರತೀಯ ನ್ಯಾಯಮೂರ್ತಿಗಳು ಮಲ್ದಾರರಾವ್‌ನ ಮೇಲಿನ ಎಲ್ಲಾ ಆರೋಪಗಳೂ ನಿರಾಧಾರವೆಂದು ವಜಾ ಮಾಡಿದರು. ಆದರೂ ಬ್ರಿಟಿಷರು ಅವನನ್ನು ಗದ್ದಿಯಿಂದ ಇಳಿಸಿದರು, ಅವನ ಉತ್ತರಾಧಿಕಾರಿಗಳಿಗೂ ಗದ್ದಿಯ ಮೇಲಿನ ಹಕ್ಕನ್ನು ಮುಟ್ಟುಗೋಲು ಹಾಕಿಕೊಂಡರು.
ಎರಡನೆಯ ಸಂದರ್ಭ ಮಣಿಪುರ ರಾಜ್ಯದ್ದು. 1891ರಲ್ಲಿ ಅಲ್ಲಿ ಒಂದು ದಂಗೆ ಸಂಭವಿಸಿತು. ಆ ಕಾರಣದಿಂದ ರಾಜಾ ಶೂರಚಂದ್ರಸಿಂಗ್‌ನನ್ನು ಪದಚ್ಯುತಿಗೊಳಿಸಲಾಯಿತು, ಸೈನ್ಯದ ದಂಡನಾಯಕನಾಗಿದ್ದ ಅವನ ತಮ್ಮನನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ಸಿಂಹಾಸನದ ಮೇಲೆ ರಾಜಮನೆತನಕ್ಕೆ ಸೇರಿದ ಒಂದು ಮಗುವನ್ನು ಕುಳ್ಳಿರಿಸಿ ಬ್ರಿಟಿಷ್ ರೆಸಿಡೆಂಟನ ರೀಜೆನ್ಸಿಯನ್ನು ಹೇರಲಾಯಿತು. ಈ ಸಂದರ್ಭವು ಬ್ರಿಟಿಷರು ದೇಶೀಯ ರಾಜರೊಂದಿಗೆ ಇಟ್ಟುಕೊಂಡ ಸಂಬಂಧಗಳು ಈ ಕೆಳಗಿನ ತತ್ವಗಳನ್ನು ನಿರ್ದಿಷ್ಟಪಡಿಸಿತು :
1) ದೇಶೀಯ ರಾಜ್ಯದ ವಾರಸುದಾರಿಕೆಯ ವಿಚಾರದಲ್ಲಿ ಕೈ ಹಾಕಲು ಬ್ರಿಟಿಷರಿಗೆ ಅಧಿಕಾರವಿದ್ದಿತು.
ii) ಬ್ರಿಟಿಷರಿಗೆ ಯಾವನೇ ರಾಜನು ತೋರಿಸುವ ಅವಿಧೇಯತೆಯನ್ನು ದಂಗೆಯೆಂದು ಪರಿಗಣಿಸಲಾಗುವುದು.
ii) ಯಾವ ಅರಸನಿಗೆ ಮತ್ತು ಅವನ ಬಂಧುಗಳಿಗೆ ಬೇಕಾದರೂ ತಮಗೆ ಇಚ್ಛೆ. ಬಂದ ರೀತಿಯಲ್ಲಿ ಶಿಕ್ಷೆ ವಿಧಿಸುವ ಅಧಿಕಾರ ಬ್ರಿಟಿಷರಿಗೆ ಬಂದಿತು.
iv) ಸ್ವತಂತ್ರ ರಾಷ್ಟ್ರಗಳ ಪಾರಸ್ಪರಿಕ ಸಂಬಂಧಗಳಲ್ಲಿ ಅಂತರ ರಾಷ್ಟ್ರೀಯ ಕಾನೂನು ಕಟ್ಟಳೆಗಳು ದೇಶೀಯ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ.
1926ರಲ್ಲಿ ಬ್ರಿಟಿಷರು ಹೈದರಾಬಾದು ರಾಜ್ಯದ ವ್ಯವಹಾರದಲ್ಲಿ ತಲೆಹಾಕಿದರು. ಬ್ರಿಟಿಷರ ರಕ್ಷಣೆಯಿದ್ದುದರಿಂದ ಮಾತ್ರವೇ ದೇಶೀಯ ರಾಜರು ಸುರಕ್ಷಿತರು ಎಂಬುದನ್ನು ದೃಢಪಡಿಸಲಾಯಿತು.
ದೇಶೀಯ ರಾಜರ ಮೇಲೆ ಬ್ರಿಟಿಷರ ಪ್ರಭುತ್ವದ ಹಕ್ಕನ್ನು ಲಾರ್ಡ್ ಕರ್ಜನ್ ಮತ್ತೆ ಒತ್ತಿ ಹೇಳಿದನು. ಆದರೆ ಬ್ರಿಟಿಷ್ ಪ್ರಾಂತಗಳಲ್ಲಿ ರಾಷ್ಟ್ರೀಯ ಅಂದೋಲನವು ಗಂಗಟ್ಟಿಕೊಳ್ಳುತ್ತಿದ್ದುದರಿಂದ ರಾಜರನ್ನು ಬ್ರಿಟಿಷರ ಕಡೆಗೆ ಹೆಚ್ಚು ನಿಕಟವಾಗಿ ತರಲು ಕೂಡ ಪ್ರಯತ್ನಿಸಿದನು. ಅದಕ್ಕೆ ತಕ್ಕ ಕ್ರಮಗಳನ್ನು ಅವನು ಕೈಗೊಂಡನು. ದೇಶೀಯ ರಾಜರ ಸೈನ್ಯಗಳನ್ನು ಬ್ರಿಟಿಷ್ ಭಾರತೀಯ ಸೇನೆಯ ಭಾಗಗಳೆಂದು ಅಂಗೀಕರಿಸಿ ಅವರಿಗೆ ಬ್ರಿಟಿಷ್ ಸೇನಾಧಿಕಾರಿಗಳಿಂದ ಉತ್ತಮ ತರಬೇತಿ ಕೊಡಿಸಲು ಏರ್ಪಾಟು ಮಾಡಲಾಯಿತು. ದೇಶೀಯ ರಾಜರ ನಡುವೆ ಪರಸ್ಪರ ಸಂಬಂಧಗಳನ್ನು ಬೆಳೆಸಲು ಅವಕಾಶವನ್ನು ಒದಗಿಸಿದನು. ಲಾರ್ಡ್ ಲಿಟ್ಟನ್ ದೇಶೀಯ ರಾಜರಿಗಾಗಿ ಒಂದು ಸಾಮಾನ್ಯ ಸಲಹಾ ಸಮಿತಿಯನ್ನು ರಚಿಸಲು ಸೂಚಿಸಿದ್ದನು. ಲಾರ್ಡ್ ಕರ್ಜನ್ ಮತ್ತು ಲಾರ್ಡ್ ಮಿಂಟೋ ಕೂಡ ಅದನ್ನು ಅಪೇಕ್ಷಿಸಿದರು. ಆದರೆ ಬ್ರಿಟಿಷ್ ಸರಕಾರವು ಆ ಸಲಹೆಯನ್ನು ನಿರಾಕರಿಸಿತು. ಆದರೆ ಮೊದಲನೆಯ ಮಹಾಯುದ್ಧವಾದ ಮೇಲೆ ಭಾರತದ ರಕ್ಷಣಾ ಪ್ರಯತ್ನಗಳಲ್ಲಿ ದೇಶೀಯ ಅರಸರ ಸಹಕಾರವನ್ನು ಪಡೆಯುವ ಅಗತ್ಯ ಮನವರಿಕೆಯಾಯಿತು. ಆದ್ದರಿಂದ ಲಾರ್ಡ್ ಹಾರ್ಡಿಂಜ್ ಪರಸ್ಪರ ಸಲಹೆ ಸಮಾಲೋಚನೆಗಳಿಗಾಗಿ ದೇಶೀಯ ಅರಸರ ಸಮಾವೇಶವನ್ನು ಕರೆಯುವ ಪದ್ಧತಿಯನ್ನು ಪ್ರಾರಂಭಿಸಿದನು. ಮಾಂಟೆಗ್ಯೂ-ಚೆಲ್ಸ್ ಫರ್ಡ್ ವರದಿಯೂ ಪರಸ್ಪರ ಪ್ರಯೋಜನಗಳಿಗಾಗಿ ಭಾರತ ಸರಕಾರವು ಸಮಾಲೋಚಿಸಬಲ್ಲ ದೇಶೀಯ ರಾಜರ ಒಂದು ಖಾಯಂ ಸಂಸ್ಥೆಯಿರಬೇಕು ಎಂದು ಸೂಚಿಸಿತು. ಇದರ ಫಲವಾಗಿ 1921ರಲ್ಲಿ ಚೇಂಬರ್ ಆಫ್ ಪ್ರಿನ್ಸಸ್ ರಚಿತವಾಯಿತು.
4. 1919-1935ರ ನಡುವಣ ಅವಧಿಯಲ್ಲಿನ ಸಂಬಂಧಗಳು
ಈ ಅವಧಿಯಲ್ಲಿ ಬ್ರಿಟಿಷರ ಅಧೀನ ಸಹಕಾರ ನೀತಿಯು ಮುಂದುವರಿಯಿತು. ಬ್ರಿಟಿಷರು ಒಂದುಕಡೆ ದೇಶೀಯ ರಾಜರ ಮೇಲೆ ತಮ್ಮ ಪ್ರಭುತ್ವದ ಹಕ್ಕನ್ನು ಸ್ಥಿರೀಕರಿಸಿ ಮತ್ತಷ್ಟು ಸ್ಪಷ್ಟಪಡಿಸಿದರು ; ಇನ್ನೊಂದು ಕಡೆ ಚೇಂಬರ್ ಆಫ್ ಪ್ರಿನ್ಸಸ್ ಮೂಲಕ ಅಖಿಲಭಾರತ ವ್ಯವಹಾರಗಳಲ್ಲಿ ಅವರ ಸಹಕಾರವನ್ನು ಕೋರಿದರು. ಚೇಂಬರ್ ಆಫ್ ಪ್ರಿನ್ಸಸ್ ಅಂಗದ ಸ್ಥಾಪನೆ ಎರಡು ಅಂಶಗಳನ್ನು ನಿರ್ಧರಿಸಿತು. ಮೊದಲನೆಯದಾಗಿ ದೇಶೀಯ ರಾಜರು ಪರಸ್ಪರ ಆಸಕ್ತಿಯ ವಿಚಾರಗಳಲ್ಲಿ ಒಬ್ಬರೊಡನೊಬ್ಬರು ಸಮಾಲೋಚಿಸಬಹುದಾಯಿತು. ಎರಡನೆಯದಾಗಿ ಅಖಿಲ ಭಾರತ ವ್ಯವಹಾರಗಳಲ್ಲಿ ಭಾರತ ಸರಕಾರವು ದೇಶೀಯ ರಾಜರೊಂದಿಗೆ ಸಮಾಲೋಚಿಸಲು ಅವಕಾಶವಾಯಿತು.
ಹಾಗಾಗಿ ಅದರಿಂದ ರಾಜರ ಹಕ್ಕುಗಳು ಸ್ವಲ್ಪ ಹೆಚ್ಚಿದಂತಾಯಿತು. ಆದರೆ ಯಾವುದೇ ಕಾರಣದಿಂದಲೂ ಈ ಹಕ್ಕುಗಳು ಬ್ರಿಟಿಷರ ಪರಮ ಪ್ರಭುತ್ವದ ಹಕ್ಕಿಗೆ ಕುಂದನ್ನುಂಟು ಮಾಡಲಿಲ್ಲ. ಅವರು ಮುಂಚಿನಂತೆಯೇ ಬ್ರಿಟಿಷ್ ಸರಕಾರಕ್ಕೆ ಅಧೀನರಾಗಿ ಉಳಿದರು. ಇದು ವೈಸರಾಯಿ ಲಾರ್ಡ್ ರೀಡಿಂಗ್ 1926 ಮಾರ್ಚಿ 17ನೆಯ ತಾರೀಕು ಹೈದರಾಬಾದಿನ ನಿಜಾಮನಿಗೆ ಬರೆದ ಉತ್ತರದಲ್ಲಿ ಇದು ಸ್ಪಷ್ಟವಾಯಿತು. ಪ್ರಭುತ್ವವನ್ನು ಕುರಿತು ನಿಜಾಮನು ಕೆಲವು ಸ್ಪಷ್ಟಿಕರಣಗಳನ್ನು ಕೇಳಿದ್ದನು. ಉತ್ತರದಲ್ಲಿ ಲಾರ್ಡ್ ರೀಡಿಂಗ್, ನಿಜಾಮನಿಗೆ ಅವನದೇ ಸ್ವತಂತ್ರವಾದ ಹಕ್ಕುಗಳು ಯಾವುವೂ ಇಲ್ಲವೆಂದೂ, ಅವನ ರಾಜ್ಯದ ಆಂತರಿಕ ವ್ಯವಹಾರಗಳಲ್ಲಿ ಇಷ್ಟಬಂದಾಗ ಬ್ರಿಟಿಷರು ಪ್ರವೇಶ ಮಾಡಲು ಸಂಪೂರ್ಣ ಅಧಿಕಾರ ಹೊಂದಿರುವರೆಂದೂ ತಿಳಿಸಿದನು. ತಮ್ಮ ರಾಜ್ಯಗಳನ್ನು ಕುರಿತ ತಮ್ಮ ಹಕ್ಕುಗಳ ಬಗೆಗೆ ಸ್ಪಷ್ಟಿಕರಣಬೇಕೆಂದು ಬಯಸುತ್ತಿದ್ದ ದೇಶೀಯ ರಾಜರಿಗೆ ಲಾರ್ಡ್ ರೀಡಿಂಗ್‌ನ ಪತ್ರವು ಕಳವಳವನ್ನುಂಟುಮಾಡಿತು. 1928ರಲ್ಲಿ ಈ ವಿಚಾರವಾಗಿ ಪರಿಶೀಲನೆ ಮಾಡಲು ಬಟ್ಲರ್ ಸಮಿತಿಯನ್ನು ನೇಮಿಸಲಾಯಿತು. ಸಮಿತಿಯು ವರದಿಯಲ್ಲಿ, ಬ್ರಿಟಿಷರು ಭಾರತದಲ್ಲಿ ಪರಮಾಧಿಕಾರ ಹೊಂದಿದ್ದಾರೆ ಎಂದು ಹೇಳಿದ್ದು ಮಾತ್ರವಲ್ಲದೆ, ಭಾರತದ ಆರ್ಥಿಕ ಅಭಿವೃದ್ಧಿ ಹಾಗೂ ಜನತಾ ಚಳುವಳಿಗಳ ಕಾರಣವಾಗಿ ಅಗತ್ಯವೆಂದು ಕಂಡುಬರುವ ಆಡಳಿತೀಯ ಬದಲಾವಣೆಗಳಲ್ಲಿ ಭಾರತ ಸರಕಾರವು ಖಂಡಿತವಾಗಿಯೂ ಮಧ್ಯಪ್ರವೇಶ ಮಾಡಬಹುದು ಎಂದು ಹೇಳಿತು.
5. 1935-1947ರ ನಡುವಣ ಅವಧಿಯಲ್ಲಿನ ಸಂಬಂಧ
1935ರ ಗವರ್ನಮೆಂಟ್ ಆಫ್ ಇಂಡಿಯಾ ಶಾಸನವು ದೇಶೀಯ ರಾಜ್ಯಗಳನ್ನು ಒಳಗೊಂಡ ಭಾರತ ಒಕ್ಕೂಟ ಸ್ನಾಪನೆಯ ಸಲಹೆ ಮಾಡಿತು. ನೆಹರೂ ಸಮಿತಿ ಹಾಗೂ ಭಾರತ ಸರಕಾರದ ಅಧಿಕೃತ ಸಮಿತಿಗಳು ಈ ಸಲಹೆಯನ್ನು ಸೂಚಿಸಿದ್ದುವು. ದೇಶೀಯ ರಾಜರೂ ಅದನ್ನು ಸ್ವಾಗತಿಸಿದರು. ಆದರೆ ಅಷ್ಟರಲ್ಲಿ ಎರಡನೆಯ ಮಹಾಯುದ್ಧವು ಪ್ರಾರಂಭವಾದುದರಿಂದ ಅದನ್ನು ಆಚರಣೆಗೆ ತರಲಾಗಲಿಲ್ಲ.
ಯುದ್ಧವು ನಡೆಯುತ್ತಿದ್ದಾಗ, ಅಖಿಲಭಾರತ ಕಾಂಗ್ರೆಸ್ ಪಕ್ಷವು ಭಾರತ ಸರಕಾರದ ಯುದ್ಧ ಪ್ರಯತ್ನಗಳಲ್ಲಿ ಸಹಕರಿಸಲು ನಿರಾಕರಿಸಿತು. ಭಾರತೀಯ ನಾಯಕರನ್ನು ಒಲಿಸಲು ಭಾರತ ಸರಕಾರವು ಅನೇಕ ಯೋಜನೆಗಳನ್ನು > ಮುಂದಿಟ್ಟಿತು. 1942ರಲ್ಲಿ ಕ್ರಿಪ್ಟ್ ಯೋಜನೆ, 1945ರಲ್ಲಿ ವೇವೆಲ್ ಯೋಜನೆ ಮತ್ತು 1946ರಲ್ಲಿ ಕ್ಯಾಬಿನೆಟ್ ಆಯೋಗದ ಯೋಜನೆಗಳು ಸೂಚಿತವಾದ ಈ ಎಲ್ಲಾ ಯೋಜನೆಗಳಲ್ಲೂ ಭಾರತವು ಸ್ವಾತಂತ್ರ್ಯ ಪಡೆದ ಒಡನೆಯೇ ದೇಶೀಯ ರಾಜ್ಯಗಳ ಮೇಲೆ ಬ್ರಿಟಿಷ್ ಪ್ರಭುತ್ವವು ಕೊನೆಗೊಳ್ಳುವುದು ಎಂದು ಹೇಳಲಾಗಿತ್ತು. ಬ್ರಿಟನ್ನಿನ ಪ್ರಧಾನ ಮಂತ್ರಿ ಅಟ್ಟಿ ಅವರು 1947 ಫೆಬ್ರವರಿ 20ರಂದು ಮತ್ತು ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಜೂನ್ 3ರಂದು ನೀಡಿದ ಹೇಳಿಕೆಗಳು ಬಹು ಸ್ಪಷ್ಟವಾಗಿ, ಭಾರತವು ಸ್ವಾತಂತ್ರ್ಯ ಗಳಿಸಿದೊಡನೆಯೇ ಬ್ರಿಟಿಷ್ ಪರಮಾಧಿಕಾರವು ಕೊನೆಗೊಳ್ಳುವುದು ಎಂದು ಹೇಳಿದುವು. ರಾಜ್ಯಗಳು ಭಾರತದೊಂದಿಗೆ ಅಥವಾ ಪಾಕೀಸ್ತಾನದೊಂದಿಗೆ ಸೇರಿಕೊಳ್ಳಲು ಸ್ವತಂತ್ರವಾಗಿರುತ್ತವೆ ಎಂದು ಹೇಳಿದರು. ಕೆಲವು ರಾಜರು ಭಾರತದೊಂದಿಗಾಗಲಿ ಪಾಕೀಸ್ತಾನದೊಂದಿಗಾಗಲಿ ಸೇರಿಕೊಳ್ಳದೆ ಸ್ವತಂತ್ರವಾಗಿ ಉಳಿಯುವ ಹಕ್ಕು ತಮಗಿರಬೇಕೆಂದು ಅಪೇಕ್ಷೆ ವ್ಯಕ್ತಪಡಿಸಿದರು. ಆದರೆ ಈ ಸೂಚನೆಯನ್ನು ಬ್ರಿಟಿಷ್ ಸರಕಾರ ನಿರಾಕರಿಸಿತು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರ ಭಾರತ ಮತ್ತು ಪಾಕೀಸ್ತಾನ ಎಂಬ ಎರಡು ಸ್ವತಂತ್ರ ದೇಶಗಳ ಸೃಷ್ಟಿಯಾಯಿತು. ಆ ಗಳಿಗೆಗೆ ಬ್ರಿಟಿಷ್ ಪರಮಾಧಿಕಾರವು ಕೊನೆಗೊಂಡಿತು. ರಾಜ್ಯಗಳು ಭಾರತ ಅಥವಾ ಪಾಕೀಸ್ತಾನದೊಂದಿಗೆ ಸೇರಿಕೊಳ್ಳಬೇಕೆಂದು ಅವಕಾಶ ಕೊಡಲಾಯಿತು.
6. ದೇಶೀಯ ರಾಜ್ಯಗಳ ಕ್ರೋಡೀಕರಣ ಮತ್ತು ವಿಲೀನ
1947 ಆಗಸ್ಟ್ 15ರಂದು ಭಾರತದಲ್ಲಿ ಒಂದು ಮಧ್ಯಂತರ ಸರಕಾರವು ರಚನೆಯಾಯಿತು. ಅದರಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಗೃಹ ಸಚಿವರಾದರು. ಮೊದಲು ಅವರು ದೇಶೀಯ ರಾಜ್ಯಗಳ ಕ್ರೋಡೀಕರಣಕ್ಕೆ ಪ್ರಯತ್ನಿಸಿದರು. ಸಣ್ಣ ಸಂಸ್ಥಾನಗಳು ಒಂದರೊಡನೊಂದು ಸೇರಿಕೊಂಡು ಸುಭದ್ರವಾದ ಆಡಳಿತೀಯ ಘಟಕಗಳಾಗುವಂತೆ ಅಥವಾ ನೆರೆಯ ಭಾರತೀಯ ಪ್ರಾಂತದೊಂದಿಗೆ ವಿಲೀನಗೊಳ್ಳುವಂತೆ ಮಾಡಲಾಯಿತು. ಉದಾಹರಣೆಗೆ, ಒರಿಸ್ಸಾದ ಬಳಿಯ ಕೆಲವು ರಾಜ್ಯಗಳನ್ನು ಒರಿಸ್ಸಾ ಪ್ರಾಂತದಲ್ಲಿ ವಿಲೀನಗೊಳಿಸಲಾಯಿತು. ಮಧ್ಯಪ್ರದೇಶದ ಬಳಿಯ ಕೆಲವು ರಾಜ್ಯಗಳನ್ನು ಮಧ್ಯಪ್ರದೇಶಕ್ಕೆ ಸೇರಿಸಲಾಯಿತು. ಬೇರೆ ಕೆಲವು ಸಣ್ಣ ರಾಜ್ಯಗಳನ್ನು ಭಾರತ ಸರಕಾರವು ವಶಪಡಿಸಿಕೊಂಡು ಕೇಂದ್ರಾಡಳಿತ ಪ್ರದೇಶಗಳೆಂದು ಸಾರಲಾಯಿತು. ಉದಾಹರಣೆಗೆ ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ, ಇತ್ಯಾದಿ. ಕೆಲವು ರಾಜ್ಯಗಳನ್ನು ಒಂದರೊಡನೊಂದು ಕೂಡಿಸಿ ದೊಡ್ಡ ಘಟಕಗಳನ್ನಾಗಿ ಮಾಡಲಾಯಿತು. ಉದಾಹರಣೆಗೆ ಪೆಪ್ಪು (PEPSU), ರಾಜಾಸ್ಥಾನ ಯೂನಿಯನ್ ಇತ್ಯಾದಿ. ಹೀಗೆ ಬಹುತೇಕ ದೇಶೀಯ ರಾಜ್ಯಗಳು ಭಾರತ ಯೂನಿಯನ್‌ಗೆ ಸೇರಿದುವು. ಕೆಲವು ರಾಜ್ಯಗಳು ಪಾಕೀಸ್ತಾನದ ಜೊತೆಗೂಡಿದುವು. ಕಾಶ್ಮೀರ ಮತ್ತು ಹೈದರಾಬಾದುಗಳು ಸ್ವತಂತ್ರವಾಗಿ ಉಳಿಯಲು ಪ್ರಯತ್ನಿಸಿದುವು. ಆದರೆ ಆ ಪ್ರಯತ್ನಗಳನ್ನು ವಿಫಲಗೊಳಿಸಲಾಯಿತು. ಕೊನೆಗೆ ಅವು ಇಂಡಿಯನ್ ಯೂನಿಯನ್ನಿಗೆ ಸೇರಿದುವು. ಹಾಗಾಗಿ ಸ್ವಾತಂತ್ರೋತ್ತರ ಭಾರತದಲ್ಲಿ ಯಾವ ದೇಶೀಯ ರಾಜ್ಯವೆಂಬುದು ಉಳಿಯಲಿಲ್ಲ.