UGC: ಪರೀಕ್ಷಾ ಶುಲ್ಕ ಮರುಪಾವತಿ ನೀತಿಗೆ ಬದ್ಧರಾಗಿರಿ,ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನಿರ್ದೇಶನ|ಆಯೋಗದ ಸ್ಪಷ್ಟನೆ.
UGC: ಪರೀಕ್ಷಾ ಶುಲ್ಕ ಮರುಪಾವತಿ ನೀತಿಗೆ ಬದ್ಧರಾಗಿರಿ,ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನಿರ್ದೇಶನ|ಆಯೋಗದ ಸ್ಪಷ್ಟನೆ.
ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹಿಂದಿನ ವರ್ಷದ ನಿಯಮಗಳೇ ಅನ್ವಯವಾಗಲಿವೆ ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ ಸ್ಪಷ್ಟಪಡಿಸಿದೆ.
2024ರ ಜೂನ್ 12ರಂದು ಯುಜಿಸಿ 2024-252 ಶೈಕ್ಷಣಿಕ ಸಾಲಿಗಾಗಿ ಶುಲ್ಕ ಮರುಪಾವತಿ ನೀತಿಯನ್ನು ರೂಪಿಸಿತ್ತು. ಇದರ ಅವಧಿಯು 2025ರ ಅಕ್ಟೋಬರ್ 31ರವರೆಗೆ ಎಂದು ತಿಳಿಸಲಾಗಿತ್ತು. ಈ ಅವಧಿಯಲ್ಲಿಯೇ ಪ್ರವೇಶ ಪ್ರಕ್ರಿಯೆಗಳು ನಡೆದಿರುವುದರಿಂದ ಯುಜಿಸಿಯಿಂದ ಹೊಸ ನೀತಿ ಬಿಡುಗಡೆಯಾಗುವ ತನಕವೂ ಇದೇ ನಿಯಮಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರವೇಶ ರದ್ದು ಅಥವಾ ಹಿಂಪಡೆದ ವೇಳೆ ಉನ್ನತ ಶಿಕ್ಷಣ ಸಂಸ್ಥೆಗಳು ಶುಲ್ಕ ಮರುಪಾವತಿ ಮಾಡದಿರುವ ಬಗ್ಗೆ ಸಂತ್ರಸ್ತರಿಂದ ಯುಜಿಸಿಗೆ ನಿರಂತರವಾಗಿ ದೂರುಗಳು ಸಲ್ಲಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶುಲ್ಕ ಮರುಪಾವತಿ ನೀತಿಯನ್ನು ರೂಪಿಸಲಾಗಿತ್ತು.
ಶುಲ್ಕ ಮರುಪಾವತಿಗೆ ಸಂಬಂಧಿಸಿದ ಯಾವುದೇ ಪ್ರಕರಣಗಳಿದ್ದರೂ ಈಗಾಗಲೇ ಜಾರಿಯಲ್ಲಿರುವ ನಿಯಮಗಳ ಅನ್ವಯ ಪರಿಹರಿಸತಕ್ಕದ್ದು ಎಂದು ಯುಜಿಸಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮತ್ತೊಮ್ಮೆ ನಿರ್ದೇಶನ ನೀಡಿದೆ. ಇದಕ್ಕೆ ತಪ್ಪಿದ್ದಲ್ಲಿ ಅನುದಾನಕ್ಕೆ ತಡೆಯೂ ಸೇರಿದಂತೆ ಸಂಸ್ಥೆಯ ಸಂಯೋಜನೆ ರದ್ದುಗೊಳಿಸುವ ಶಿಸ್ತುಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಯುಜಿಸಿಯಿಂದ ಅಂಗೀಕೃತ ಹಾಗೂ ಆಯಾ ವಿವಿಗಳ ವ್ಯಾಪ್ತಿಯಲ್ಲಿ ಸಂಯೋಜಿತ ಕಾಲೇಜುಗಳಿಗೆ ಈ ನಿಯಮ ಅನ್ವಯವಾಗಲಿದೆ. ಸೀಟು ಹಂಚಿಕೆ ಅಥವಾ ಇತರ ಉದ್ದೇಶಗಳಿಗಾಗಿ ರಚಿಸಿಕೊಂಡ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಕೌನ್ಸೆಲಿಂಗ್ ಹಾಗೂ ಶಿಕ್ಷಣ ಸಂಸ್ಥೆಗಳ ಪರವಾಗಿ ಶುಲ್ಕ ಸಂಗಗ್ರಹಿಸುವ ವ್ಯವಸ್ಥೆಗಳಿಗೂ ಈ ನಿಯಮಗಳು ಅನ್ವಯವಾಗಲಿದೆ ಎಂದು ಯುಜಿಸಿ ಸ್ಪಷ್ಟಪಡಿಸಿದೆ.
ಯಾವ ಹಂತದಲ್ಲಿ ಎಷ್ಟು?
▪️ಯಾವ ಅವಧಿಗೆ ಎಷ್ಟು ಶುಲ್ಕ ಮರುಪಾವತಿಸಬೇಕೆಂಬುದಕ್ಕೆ ಯುಜಿಸಿ ರೂಪಿಸಿರುವ ನಿಯಮಗಳು
▪️ಪ್ರವೇಶಕ್ಕೆ ಅಂತಿಮ ದಿನದ 15 ದಿನಕ್ಕೂ ಮೊದಲು: ಶೇ.100 ಶುಲ್ಕ ಮರುಪಾವತಿ
▪️ಪ್ರವೇಶಕ್ಕೆ ಅಂತಿಮ ದಿನಕ್ಕೆ 15 ದಿನಗಳಿಗಿಂತ ಕಡಿಮೆ ಅವಧಿ: ಶೇ.90 ಶುಲ್ಕ ಮರುಪಾವತಿ
▪️ಪ್ರವೇಶದ ಅಂತಿಮ ದಿನ ಮುಗಿದ 15 ದಿನಗಳಲ್ಲಿ: ಶೇ.80
▪️ಪ್ರವೇಶಕ್ಕೆ ಅಂತಿಮ ದಿನದ ನಂತರ 15 ದಿನಕ್ಕೂ ಹೆಚ್ಚು: ಶೇ.50
▪️ಪ್ರವೇಶದ ಅಂತಿಮ ದಿನ ಮುಗಿದು 30 ದಿನಗಳಾದ ಬಳಿಕ: ಶುಲ್ಕ ಮರುಪಾವತಿ ಇಲ್ಲ
▪️ಸಂಸ್ಕರಣಾ ಶುಲ್ಕವಾಗಿ 1000 ರೂ. ಗಳಿಗಿಂತ ಹೆಚ್ಚು ಪಡೆಯುವಂತಿಲ್ಲ.