Deep Fake: ಡೀಪ್‌ಫೇಕ್ ಏನಿದು ಮಾಯಾಜಾಲ?
ಹೆಚ್ಚುತ್ತಿರುವ ಡೀಪ್‌ಫೇಕ್ ವಿಡಿಯೊಗಳಿಂದ ಬಚಾವ್ ಆಗುವುದು ಹೇಗೆ, ಅದರಿಂದ ಆಗುವ ಲಾಭಗಳೇನು, ನಷ್ಟಗಳೇನು, ಎಚ್ಚೆತ್ತುಕೊಳ್ಳುವ ಬಗೆ ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.
ಒಬ್ಬ ಪ್ರಸಿದ್ಧ ವ್ಯಕ್ತಿಯು ಒಂದು ವಿಡಿಯೊದಲ್ಲಿ ತುಂಬಾ `ಆಘಾತಕಾರಿ ಹೇಳಿಕೆ ನೀಡುತ್ತಿದ್ದಾರೆ. ನಿಮ್ಮ ಬಾಸ್‌ನ ಧ್ವನಿಯಲ್ಲೇ ಬರುವ ಒಂದು ಫೋನ್ ಕರೆ, ತುರ್ತಾಗಿ ಹಣ ಪಾವತಿಸಲು ಕೇಳುತ್ತಿದೆ. ನಿಮ್ಮ ಸ್ನೇಹಿತ ಹೊಸ ನಂಬರ್‌ನಿಂದ ತನ್ನದೇ ಆದ ವಿಡಿಯೊ ಕಳಿಸಿ ಸಮಸ್ಯೆಯಲ್ಲಿರುವುದಾಗಿ ಹೇಳುತ್ತಾನೆ. ಇವೆಲ್ಲವನ್ನೂ ನೋಡಿದಾಗ ಅಬ್ಬಾ ಎಷ್ಟು ನಿಜವಾಗಿ ಕಾಣುತ್ತಿದೆ! ಎಂದು ನಿಮಗನಿಸಿದರೆ ಅದೇ ಡೀಫ್‌ಫೇಕ್ ತಂತ್ರಜ್ಞಾನದ ಉದ್ದೇಶ.
ಡೀಪ್‌ಫೇಕ್‌ಗಳು ಎಂದರೆ, ಎಐ (ಕೃತಕ ಬುದ್ದಿಮತ್ತೆ) ಬಳಸಿ ಸೃಷ್ಟಿಸಲಾದ ಅಥವಾ ಎಡಿಟ್ ಮಾಡಲಾದ ವಿಡಿಯೊ, ಆಡಿಯೋ ಅಥವಾ ಚಿತ್ರಗಳು. ಇವು ನೋಡಲು ಮತ್ತು ಕೇಳಲು ಸಂಪೂರ್ಣವಾಗಿ ನೈಜವಾಗಿ ಕಾಣುತ್ತವೆ. ಇವು ಒಬ್ಬ ವ್ಯಕ್ತಿಯ ಮುಖ, ಧ್ವನಿ ಅಥವಾ ಶೈಲಿಯನ್ನು ಎರವಲು ಪಡೆದು ಅವರು ಆಡದೇ ಇರುವ ಮಾತುಗಳು ಮತ್ತು ಮಾಡದೇ ಇರುವ ಕ್ರಿಯೆಗಳನ್ನು ಸೃಷ್ಟಿಸುತ್ತವೆ. ಈ ತಂತ್ರಜ್ಞಾನವು ಒಂದು ಸಂಶೋಧನೆಯಾಗಿ ಆರಂಭವಾದರೂ ಇಂದು ಇದನ್ನು ವಂಚನೆ, ವದಂತಿ ಹಬ್ಬಿಸಲು ಮತ್ತು ವ್ಯಕ್ತಿಗಳ ಮಾನಹಾನಿಗೆ ಬಳಸಲಾಗುತ್ತಿದೆ. ಆದರೆ, ಒಂದು ಒಳ್ಳೆಯ ವಿಷಯವೇನೆಂದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಟೆಕ್ ಎಕ್ಸ್‌ಪರ್ಟ್ ಆಗಬೇಕಾಗಿಲ್ಲ. ಸಮಾಧಾನದಿಂದ ಯೋಚಿಸುವ ಮತ್ತು ಕೆಲವು ಒಳ್ಳೆಯ ಅಭ್ಯಾಸಗಳಿಂದ ಈ ಮಾಯಾಜಾಲಕ್ಕೆ ಬಲಿಯಾಗುವುದನ್ನು ತಪ್ಪಿಸಬಹುದು.
ಡೀಪ್ ಫೇಕ್ ಗಳು ಹೇಗೆ ಕೆಲಸ ಮಾಡುತ್ತವೆ?
ಪ್ರತಿಯೊಂದು ಮುಖಕ್ಕೂ ಅದರದೇ ಆದ ಮಾದರಿಗಳಿವೆ. ಕಣ್ಣಿನ ಆಕಾರ, ನಿರ್ದಿಷ್ಟ ಶಬ್ದಗಳಿಗೆ ತುಟಿಗಳು ಚಲಿಸುವ ರೀತಿ, ಕಣೆಪ್ಪೆ ಮಿಟುಕಿಸುವ ಲಯ. ಎಐ ವ್ಯವಸ್ಥೆಗಳು ಈ ಮಾದರಿಗಳನ್ನು ಅನೇಕ ಉದಾಹರಣೆಗಳಿಂದ ಕಲಿತು, ನಂತರ ಅವುಗಳನ್ನು ಇನ್ನೊಬ್ಬ ವ್ಯಕ್ತಿಯ ಮೇಲೆ ಪೇಂಟ್ ಮಾಡುತ್ತವೆ ಹ ಅಥವಾ ಹೊಸದಾಗಿ ಸೃಷ್ಟಿಸುತ್ತವೆ. ಇದೇ ತಂತ್ರ ಧ್ವನಿ ಕ್ಲೋನ್‌ಗಳಿಗೂ (Voice Clone) ಅನ್ವಯಿಸುತ್ತದೆ. ಕೆಲವೇ ನಿಮಿಷಗಳ ಸ್ಪಷ್ಟವಾದ ಆಡಿಯೋ, ಮೂಲ ಧ್ವನಿಗೆ ಅತ್ಯಂತ ಹತ್ತಿರವಾದ ಧ್ವನಿಯನ್ನು ಸೃಷ್ಟಿಸಲು ಎಐಗೆ ಸಾಕಾಗುತ್ತದೆ. ಮುಖ ಮತ್ತು ಧ್ವನಿಯನ್ನು ಒಟ್ಟಿಗೆ ಸೇರಿಸಿದಾಗ ಫಲಿತಾಂಶವು, ವಿಶೇಷವಾಗಿ ಸಣ್ಣಫೋನ್ ಸ್ಟೀನ್ ಮೇಲೆ ನಂಬಲಸಾಧ್ಯವಾದಷ್ಟು ನೈಜವಾಗಿ ಕಾಣುತ್ತದೆ.
ನಮ್ಮ ಮೆದುಳು ಯಾಕೆ ಇದಕ್ಕೆ ಮರುಳಾಗುತ್ತದೆ?
ನಾವು ಬರವಣಿಗೆಗಿಂತ ದೃಶ್ಯ ಮತ್ತು ಶಬ್ದಗಳನ್ನು ಹೆಚ್ಚು ನಂಬುತ್ತೇವೆ. ತುಟಿಗಳು ಚಲಿಸುವುದನ್ನು ಮತ್ತು ಪರಿಚಿತ ಧ್ವನಿಯನ್ನು ಕೇಳಿದಾಗ ನಾವು ನಮ್ಮ ಅನುಮಾನವನ್ನು ಬದಿಗಿಡುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ನಾವು ವೇಗವಾಗಿ ಸ್ಮಾಲ್ ಮಾಡುತ್ತೇವೆ, ಬೇಗನೆ ಪ್ರತಿಕ್ರಿಯಿಸುತ್ತೇವೆ ಮತ್ತು ಇನ್ನೂ ವೇಗವಾಗಿ ಫಾರ್ವಡ್್ರ ಮಾಡುತ್ತೇವೆ. ಡೀಪ್ ಫೇಕ್‌ಗಳು ಈ ವೇಗ+ ಭಾವನೆಯ ಚಕ್ರವನ್ನು ಬಳಸಿಕೊಳ್ಳುತ್ತವೆ. ಒಂದು ವಿಡಿಯೋ ಕ್ಲಿಪ್ ನಿಮಗೆ ಕೋಪ, ಹೆಮ್ಮೆ ಅಥವಾ ಭಯವನ್ನುಂಟು ಮಾಡಿದರೆ ನೀವು ಅದನ್ನು ಪರಿಶೀಲಿಸದೆ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚು ವಂಚಕರಿಗೆ ಇದು ತಿಳಿದಿದ್ದು ಅವರು ತಮ್ಮ ಸಂದೇಶಗಳಲ್ಲಿ ಯಾರಿಗೂ ಹೇಳಬೇಡಿ, ತಕ್ಷಣ ಕ್ರಮ ಕೈಗೊಳ್ಳಿ ಎಂಬಂತಹ ಆತುರವನ್ನು ಸೃಷ್ಟಿಸುತ್ತಾರೆ.
ದೈನಂದಿನ ಜೀವನದಲ್ಲಿ ಡೀಪ್ ಫೇಕ್‌ಗಳು ಎಲ್ಲಿ ಕಾಣಿಸಿಕೊಳ್ಳುತ್ತವೆ?
ಹೆಚ್ಚಿನ ಜನರಿಗೆ ಮೊದಲ ಅಪಾಯ ಹಣ ಮತ್ತು ಮಾನಹಾನಿಯಿಂದ. ಒಬ್ಬವಂಚಕನು ಅಂಗಡಿಯ ಮಾಲೀಕನಿಗೆ ಅಥವಾ ಉದ್ಯೋಗಿಗೆ ಕ್ಲೋನ್ ಮಾಡಿದ ಧ್ವನಿಯಲ್ಲಿ ಕರೆ ಮಾಡಿ, OTP ಅಥವಾ ಹಣ ವರ್ಗಾವಣೆಗೆ ಕೇಳಬಹುದು. ವಿದ್ಯಾರ್ಥಿಗಳನ್ನು ನಕಲಿ ಸ್ಕಾಲರ್‌ಶಿಪ್ ಸಂದೇಶಗಳೊಂದಿಗೆ ಟಾರ್ಗೆಟ್ ಮಾಡಬಹುದು, ಕುಟುಂಬಗಳನ್ನು ಮುಜುಗರಕ್ಕೀಡು ಮಾಡಲು ಅಥವಾ ಬ್ಲಾಕ್‌ಮೇಲ್ ಮಾಡಲು ಸೃಷ್ಟಿಸಿದ ನಕಲಿ ಚಿತ್ರಗಳ ಮೂಲಕ ಪೀಡಿಸಬಹುದು.
ಇದಕ್ಕೆಲ್ಲಾ ಈಗ ದುಬಾರಿ ಉಪಕರಣಗಳ ಅಗತ್ಯವಿಲ್ಲ. ಅಗ್ಗದ ಎಐ ಟೂಲ್‌ಗಳು ಮತ್ತು ಕದ್ದ ಫೋಟೋಗಳೇ ಸಾಕು.
ಶಾಲೆಗಳು ಮತ್ತು ಕಾಲೇಜುಗಳು ಹೇಗೆ ಸಹಾಯ ಮಾಡಬಹುದು?
ವಿದ್ಯಾರ್ಥಿಗಳೇ ಅತಿ ಹೆಚ್ಚು ಅಂತರ್ಜಾಲ ಸಂಪರ್ಕ ಹೊಂದಿರುವುದರಿಂದ ಅವರೇ ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಪ್ರತಿ ಸೆಮಿಸ್ಟರ್‌ನಲ್ಲಿ ಒಂದು ಸಣ್ಣ ಡಿಜಿಟಲ್-ಸಾಕ್ಷರತಾ ಅಧಿವೇಶನವು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಎರಡು ಸಣ್ಣ ವಿಡಿಯೊಗಳನ್ನು ತೋರಿಸಿ - ಒಂದು ನೈಜ, ಒಂದು ನಕಲಿ ವಿಡಿಯೊ ತೋರಿಸಿ ವಿದ್ಯಾರ್ಥಿಗಳಿಗೆ ವ್ಯತ್ಯಾಸಗಳನ್ನು ಪಟ್ಟಿ ಮಾಡಲು ಹೇಳಿ. ಪರಿಶೀಲಿಸಿ, ನಂತರ ನಂಬಿ ಎಂಬ ನಿಯಮವನ್ನು ಮತ್ತು ಫಾರ್ವರ್ಡ್ ಮಾಡದಿರುವ ಅಭ್ಯಾಸವನ್ನು ಕಲಿಸಿ.
ನೀವೇ ಟಾರ್ಗೆಟ್ ಆದರೆ ಏನು ಮಾಡಬೇಕು?
ಯಾರಾದರೂ ನಿಮ್ಮ ಮುಖ ಅಥವಾ ಧ್ವನಿಯನ್ನು ನಕಲಿ ಕ್ಲಿಪ್‌ನಲ್ಲಿ ಬಳಸಿದರೆ, ತ್ವರಿತವಾಗಿ ಆದರೆ, ಸಮಾಧಾನದಿಂದ ಕ್ರಮ ಕೈಗೊಳ್ಳಿ. ಸಾಕ್ಷ್ಯವನ್ನು ಇಟ್ಟುಕೊಳ್ಳಿ. Screenshot ಗಳನ್ನು ತೆಗೆದುಕೊಳ್ಳಿ, ಲಿಂಕ್‌ಗಳನ್ನು ಕಾಪಿ ಮಾಡಿ ಮತ್ತು ದಿನಾಂಕಗಳನ್ನು ಬರೆದಿಟ್ಟುಕೊಳ್ಳಿ. ನಿಮ್ಮ ಆಪ್ತರಿಗೆ ಮಾಹಿತಿ ನೀಡಿ. ಇದರಿಂದ ಅವರು ಮುಂದಿನ ಸಂದೇಶಗಳಿಗೆ ಬಲಿಯಾಗುವುದಿಲ್ಲ. ಆ ಕಂಟೆಂಟ್ ಅನ್ನು ಆಯಾ ಪ್ಲಾಟ್ ಫಾರ್ಮ್‌ನಲ್ಲಿ ರಿಪೋರ್ಟ್ ಮಾಡಿ (ಹೆಚ್ಚಿನ ಆ್ಯಪ್‌ಗಳಲ್ಲಿ ನಕಲಿ ಗುರುತು ಅಥವಾ ಲೈಂಗಿಕ ವಿಷಯಕ್ಕಾಗಿ ನಿರ್ದಿಷ್ಟ ಆಯ್ಕೆಗಳಿರುತ್ತವೆ), ಹಣದ ವಿಷಯವಾಗಿದ್ದರೆ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ನಿಮ್ಮ ಸರಕಾರಿ ಪೋರ್ಟಲ್ ಅಥವಾ ಸಹಾಯವಾಣಿ ಮೂಲಕ ಸೈಬರ್ ಕೈಂ ದೂರು ದಾಖಲಿಸಿ, ಸೂಕ್ಷ್ಮ ಪ್ರಕರಣಗಳಲ್ಲಿ, ವಿಶೇಷವಾಗಿ ನಕಲಿ ಚಿತ್ರಗಳ ವಿಷಯದಲ್ಲಿ ಅರ್ಥ ಮಾಡಿಕೊಳ್ಳುವಂತಹ `ನಂಬಿಕಸ್ಥ ಸ್ನೇಹಿತ ಅಥವಾ ಕಾನೂನು ಸಹಾಯವನ್ನು ತೆಗೆದುಕೊಳ್ಳಿ. ಇಂತಹ ವಿಚಾರಗಳಲ್ಲಿ ಮೌನವಾಗಿರಬೇಡಿ. ಅವಮಾನವು ದುರುಪಯೋಗಪಡಿಸಿಕೊಂಡವನಿಗೇ ಹೊರತು ಸಂತ್ರಸ್ತರಿಗಲ್ಲ.
ಸಕಾರಾತ್ಮಕವೂ ಇದೆ!
ಡೀಪ್ ಫೇಕ್ ಗಳನ್ನು ಸೃಷ್ಟಿಸುವ ಅದೇ ತಂತ್ರಜ್ಞಾನವು ಚಲನಚಿತ್ರಗಳ ನಿರ್ಮಾಣದಲ್ಲಿ ಡಬ್ಬಿಂಗ್ ಮತ್ತು ಭಾಷಾ ಕಲಿಕೆಗೆ ಸಹಾಯ ಮಾಡುತ್ತಿದೆ. ಸ್ಟುಡಿಯೋಗಳು ಬಹುಭಾಷಾ ಬಿಡುಗಡೆಗಳಿಗಾಗಿ ಪಾತ್ರಗಳ ಮಾತಿಗೆ ಆಯಾ ಭಾಷೆಗೆ ತಕ್ಕಂತೆ ತುಟಿ-ಚಲನೆಯನ್ನು ಹೊಂದಿಸಬಹುದು. ಶಿಕ್ಷಕರು ಇತಿಹಾಸದ ಪಾತ್ರಗಳನ್ನು ನೈಜವಾಗಿ ಸೃಷ್ಟಿಸಿ ಸ್ಥಳೀಯ ಉಚ್ಚಾರಣೆಯಲ್ಲಿ ಸ್ಪಷ್ಟವಾದ ವಿಡಿಯೊವನ್ನು ಕಲಿಕೆಯನ್ನು ಮತ್ತಷ್ಟು ಆಸಕ್ತಿಕರವಾಗಿಸಲು ರಚಿಸಬಹುದು. ಡೀಪ್ ಫೇಕ್ ಸಹಾಯಕ ಮತ್ತು ಹಾನಿಕಾರಕ ನಡುವಿನ ವ್ಯತ್ಯಾಸವೆಂದರೆ ಸಮ್ಮತಿ, ಸಂದರ್ಭ, ಮತ್ತು ಪ್ರಾಮಾಣಿಕತೆ.