Tuesday, October 21, 2025

ESSAY-39 ಲ್ಯಾಟರಲ್ ಎಂಟ್ರಿಯ ಸಾಧಕ-ಬಾಧಕಗಳು

  ISARESOURCEINFO       Tuesday, October 21, 2025
ESSAY-39 ಲ್ಯಾಟರಲ್ ಎಂಟ್ರಿಯ ಸಾಧಕ-ಬಾಧಕಗಳು


ಪೀಠಿಕೆ

ನಾಗರಿಕ ಸೇವೆಗಳಿಗೆ ಸಮಾನಾಂತರ ಅಥವಾ ನೇರ ಪ್ರವೇಶವು (ಲ್ಯಾಟರಲ್ ಎಂಟ್ರಿ) ವಿವಿಧ ಕ್ಷೇತ್ರಗಳಲ್ಲಿ. ಅನುಭವ ಹೊಂದಿರುವವರನ್ನು ಯಾವುದೇ ಪರೀಕ್ಷೆಗಳಿಲ್ಲದೆ, ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೆ ಅಗತ್ಯವಿದ್ದಾಗ ಸರಕಾರಿ ಸೇವೆಗಳಿಗೆ ಮಧ್ಯಮ ಮತ್ತು ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಇದು ಮುಖ್ಯವಾಗಿ ಖಾಸಗಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ತಜ್ಞರನ್ನು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಣತರನ್ನು ಒಳಗೊಂಡಿರುತ್ತದೆ.

ಈ ಕಾರ್ಯವಿಧಾನವು ದೇಶದ ಆಡಳಿತ ಯಂತ್ರಕ್ಕೆ ಹೊಸ ದೃಷ್ಟಿಕೋನಗಳು, ವಿಶೇಷ ಜ್ಞಾನ ಮತ್ತು ಫಲಿತಾಂಶ ಆಧರಿತ ಕಾರ್ಯವಿಧಾನವನ್ನು ತರುವ ಗುರಿ ಹೊಂದಿದೆ. ಈ 'ಲ್ಯಾಟರಲ್ ಎಂಟ್ರಿ'ಗಳನ್ನು ಮೂರು ವರ್ಷಗಳ ಅವಧಿಗೆ ಒಪ್ಪಂದದ ಮೇಲೆ ನೇಮಿಸಲಾಗುತ್ತದೆ. ಇದನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಬಹುದು. ಹೊಸ ಪ್ರತಿಭೆಗಳೊಂದಿಗೆ ನಾಗರಿಕ ಸೇವೆಗಳನ್ನು ಉತ್ತೇಜಿಸಲು ಇದು ಅವಕಾಶವನ್ನು ಒದಗಿಸುತ್ತದೆಯಾದರೂ, ಎಚ್ಚರಿಕೆಯಿಂದ ಪರಿಗಣಿಸಬೇಕಾದ ಸವಾಲುಗಳನ್ನೂ ಒಡ್ಡುತ್ತದೆ.

▪️ಲ್ಯಾಟರಲ್ ಎಂಟ್ರಿಯ ಮೂಲ: 

ಅಮೆರಿಕ, ಇಂಗ್ಲೆಂಡ್,ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಬೆಳ್ಳಿಯಂನಂತಹ ದೇಶಗಳಲ್ಲಿ ಲ್ಯಾಟರಲ್ ಪ್ರವೇಶವು ಸಾಮಾನ್ಯವಾಗಿದೆ. ಮುಖ್ಯವಾಗಿ, ಅಮೆರಿಕದಲ್ಲಿ ಇದು ಹೆಚ್ಚು ಪ್ರಸಿದ್ಧವಾಗಿದೆ. ಭಾರತದಲ್ಲಿ ಲ್ಯಾಟರಲ್ ಎಂಟ್ರಿಯ ಪರಿಕಲ್ಪನೆಯನ್ನು ಮೊದಲು 2005ರಲ್ಲಿ ಸ್ಥಾಪಿಸಲಾದ ಎರಡನೇ ಆಡಳಿತ ಸುಧಾರಣಾ ಆಯೋಗ (ಎಆರ್‌ಸಿ) ಅನುಮೋದಿಸಿತು. ನಂತರ 2017ರಲ್ಲಿ ನೀತಿ ಆಯೋಗವು ಪರಿಣತಿ ಮತ್ತು ಹೊಸ ದೃಷ್ಟಿಕೋನಗಳನ್ನು ತರಲು ಇದನ್ನು ಶಿಫಾರಸು ಮಾಡಿತು. ಪ್ರಸ್ತುತ ಸೀಮಿತ ಸಂಖ್ಯೆಯ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ.

▪️ಯೋಜನೆಯ ಪರವಾದ ವಾದಗಳು: 

ಇಂದು ಆಡಳಿತವು ಹೆಚ್ಚು ಸಂಕೀರ್ಣವಾಗುತ್ತಿರುವುದರಿಂದ ಸಾಮಾನ್ಯ ನಾಗರಿಕ ಸೇವಕರು ಹೊಂದಿರದ ಜ್ಞಾನದ ಅಂತರವನ್ನು ಇದು ನಿವಾರಿಸುತ್ತದೆ. ಉದಾ ಹರಣೆಗೆ: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷರಾಗಿ ಹೆಸರಾಂತ ಐಟಿ ತಜ್ಞ ನಂದನ್ ನಿಲೇಕಣಿ ಅವರ ನೇಮಕವು ಆಧಾರ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕಾರಣವಾಯಿತು.

▪️ನಾವೀನ್ಯತೆ ಮತ್ತು ಸುಧಾರಣೆಗಳು: 

ಲ್ಯಾಟರಲ್ ನೇಮಕಾತಿಗಳು ಖಾಸಗಿ ವಲಯ, ಎನ್‌ಜಿಒಗಳು, ಇತರ ಸಂಸ್ಥೆಗಳಿಂದ ಅಮೂಲ್ಯವಾದ ಅನುಭವಗಳನ್ನು ತರಬಹುದು. ಇದು ಆಡಳಿತ ಪ್ರಕ್ರಿಯೆಗಳು ಮತ್ತು ಆಡಳಿತವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

▪️ಕೊರತೆಯನ್ನು ತುಂಬುವುದು: 

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ದತ್ತಾಂಶದ ಪ್ರಕಾರ, ಸುಮಾರು 1500 ಐಎಎಸ್ ಅಧಿಕಾರಿಗಳ ಕೊರತೆಯಿದೆ. ಲ್ಯಾಟರಲ್ ಎಂಟ್ರಿ ಈ ಕೊರತೆಯನ್ನು ನೀಗಿಸಲಿದೆ.

▪️ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆ: 

ಇದು ಸರಕಾರಿ ವಲಯದಲ್ಲಿ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆಯನ್ನು ತರಲು ಸಹಾಯ ಮಾಡುತ್ತದೆ. ಇದು ಸರಕಾರಿ ಆಡಳಿತ ಯಂತ್ರದ ಅನಗತ್ಯ ವಿಳಂಬ ಧೋರಣೆ, ಕೇವಲ ನಿಯಮದ ಪುಸ್ತಕಗಳಿಗೆ ಅಂಟಿಕೊಳ್ಳುವ ಮತ್ತು ಬದಲಾವಣೆ ವಿರೋಧಿ ಮನಸ್ಥಿತಿಗೆ ಒಳ್ಳೆಯ ಔಷಧವಾಗಿದೆ.

▪️ಹೆಚ್ಚಿನ ದಕ್ಷತೆ: 

ಖಾಸಗಿ ವಲಯದ ವೃತ್ತಿಪರರು ಹೆಚ್ಚಾಗಿ ಕಾರ್ಯಕ್ಷಮತೆಗೆ ಹೆಸರಾಗಿರುತ್ತಾರೆ. ಇದು ನಾಗರಿಕ ಸೇವೆಗಳಲ್ಲಿ ದಕ್ಷತೆ ಮತ್ತು ಹೊಣೆಗಾರಿಕೆಯ ಸಂಸ್ಕೃತಿಯನ್ನು ಪರಿಚಯಿಸಬಹುದು. ಹಣಕಾಸು ಅಥವಾ ತಂತ್ರಜ್ಞಾನದಂತಹ ವಲಯಗಳಿಂದ ವೃತ್ತಿಪರ ಪರಿಣತರ ಒಳಸೇರಿಸುವಿಕೆಯು ಸರಕಾರಿ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ. ಉದಾಹರಣೆಗೆ: ಮಾಜಿ ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಡಾ. ರಘುರಾಮ್ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹೊಸ ದೃಷ್ಟಿಕೋನವನ್ನು ತಂದರು. ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರಾಗಿರುವ ಸುಮನ್ ಬೆರಿ ಅವರೂ ಕೂಡ ವುಡೋ ವಿಲ್ಸನ್ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಸ್ಕಾಲರ್ಸ್‌ನಲ್ಲಿ ಗ್ಲೋಬಲ್ ಫೆಲೋ ಮತ್ತು ರಾಯಲ್ ಡಚ್ ಶೆಲ್‌ನ ಜಾಗತಿಕ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು ಎಂಬುದನ್ನು ಗಮನಿಸಬಹುದು.

ಯೋಜನೆಯ ವಿರುದ್ಧ ಇರುವ ವಾದಗಳು:

▪️ಕಡಿಮೆ ಅವಧಿ: 

ಕೇಂದ್ರ ಸರಕಾರವು ಜಂಟಿ ಕಾರ್ಯದರ್ಶಿಗಳ ಅಧಿಕಾರಾವಧಿಯನ್ನು 3 ವರ್ಷಗಳಿಗೆ ನಿಗದಿಪಡಿಸಿದೆ. ಇಷ್ಟು ಸಮಯ ಹೊಸಬರಿಗೆ ಸಂಕೀರ್ಣ ಆಡಳಿತ ವ್ಯವಸ್ಥೆಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಮತ್ತು ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಸಾಕಾಗುವುದಿಲ್ಲ.

▪️ವಸ್ತುನಿಷ್ಠತೆ ಮತ್ತು ತಟಸ್ಥತೆಯನ್ನು ಕಾಪಾಡಿಕೊಳ್ಳುವುದು ಕಷ್ಟ:

ವೈವಿಧ್ಯಮಯ ಹಿನ್ನೆಲೆಗಳಿಂದ ವ್ಯಕ್ತಿಗಳನ್ನು ಕರೆತರುವುದು ವೈಯಕ್ತಿಕ ಹಿತಾಸಕ್ತಿ ಮತ್ತು ನಿಪಕ್ಷಪಾತದ ಕೊರತೆಗೆ ಕಾರಣವಾಗಬಹುದು. ಹೊಸದಾಗಿ ನೇಮಕಗೊಂಡವರು ಸರಕಾರದಲ್ಲಿದ್ದುಕೊಂಡು ತಮ್ಮ ಮೂಲ ಖಾಸಗಿ ಕಂಪನಿಗಳ ಪರವಾಗಿ ಕೆಲಸ ಮಾಡಬಹುದು.

▪️ಸಂಘರ್ಷಕ್ಕೆ ಎಡೆ: 

ಲ್ಯಾಟರಲ್ ಎಂಟ್ರಿ ಮೂಲಕ ಸರಕಾರಿ ಸೇವೆಗೆ ಸೇರಿದವರು ಮತ್ತು ಶಾಶ್ವತ ಅಧಿಕಾರಿಗಳ ನಡುವೆ ಸಂಘರ್ಷದ ವಾತಾವರಣ ಉಂಟಾಗಿ ಆಡಳಿತ ಯಂತ್ರವು ಅವರಂತೆಯೂ ನಡೆಯದೇ, ಇವರಂತೆಯೂ ನಡೆಯದೇ ಪಾರ್ಶ್ವವಾಯು ಪೀಡಿತವಾಗಬಹುದು. 

▪️ಅರ್ಹತೆ ಆಧರಿತ ನೇಮಕಾತಿ ದುರ್ಬಲ:

ಲ್ಯಾಟರಲ್ ಪ್ರವೇಶವು ನಾಗರಿಕ ಸೇವೆಗಳಿಗೆ ಆಧಾರವಾಗಿರುವ ಅರ್ಹತೆ ಆಧಾರಿತ ನೇಮಕಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಪಾರದರ್ಶಕವಾಗಿ ನಡೆಸದಿದ್ದರೆ, ಅದು ಆಯ್ಕೆ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತಕ್ಕೆ ಕಾರಣವಾಗಬಹುದು.

▪️ಹಿರಿಯ ಹುದ್ದೆಗಳಿಗೆ ಅನುಭವದ ಅವಶ್ಯಕತೆ:

ಶಾಶ್ವತ ವ್ಯವಸ್ಥೆಯಲ್ಲಿ ಐಎಎಸ್ ಅಧಿಕಾರಿಗಳನ್ನು 17 ವರ್ಷಗಳ ಸೇವೆಯ ನಂತರ ಜಂಟಿ ಕಾರ್ಯದರ್ಶಿ ಮಟ್ಟಕ್ಕೆ ಬಡ್ತಿ ನೀಡಲಾಗುತ್ತದೆ. ಸಾಮಾನ್ಯವಾಗಿ ಆ ಹೊತ್ತಿಗೆ ಅವರು 45 ವರ್ಷ ವಯಸ್ಸಿನವರಾಗಿರುತ್ತಾರೆ ಮತ್ತು ಹತ್ತು ವರ್ಷಗಳ ಕಾಲ ಆ ಮಟ್ಟದಲ್ಲಿ ಉಳಿಯುತ್ತಾರೆ. ಲ್ಯಾಟರಲ್ ಪ್ರವೇಶದಾರರಿಗೆ ಇದೇ ರೀತಿಯ ಅನುಭವದ ಅವಶ್ಯಕತೆಗಳನ್ನು - ಅನ್ವಯಿಸಿದರೆ, ಅದು ಉತ್ತಮ ಅಭ್ಯರ್ಥಿಗಳು ಸೇರುವುದನ್ನು ತಡೆಯಬಹುದು. ಏಕೆಂದರೆ ಅವರು ಆ ವಯಸ್ಸಿನಲ್ಲಿ ಖಾಸಗಿ ವಲಯದಲ್ಲಿ ತಮ್ಮ ವೃತ್ತಿಯ ಉತ್ತುಂಗವನ್ನು ತಲುಪಿರುತ್ತಾರೆ.

▪️ಹೊಣೆಗಾರಿಕೆಯ ಸಮಸ್ಯೆಗಳು: 

ನಾಗರಿಕ ಸೇವಕರು ಸಾರ್ವಜನಿಕರಿಗೆ ಜವಾಬ್ದಾರರಾಗಿರುತ್ತಾರೆ, ಅವರ ವೃತ್ತಿಜೀವನವು ಸಾರ್ವಜನಿಕ - ಕಾನೂನಿಗೆ ಒಳಪಟ್ಟಿರುತ್ತದೆ. ವಿಭಿನ್ನ ಹೊಣೆಗಾರಿಕೆ ಚೌಕಟ್ಟಿಗೆ ಒಗ್ಗಿಕೊಂಡಿರುವ ಹೊರಗಿನ ತಜ್ಞರು, ನಾಗರಿಕ ಸೇವೆಗಳಲ್ಲಿ ಅಗತ್ಯವಿರುವ ಸಾರ್ವಜನಿಕ ಹೊಣೆಗಾರಿಕೆಯ ಕಠಿಣ ಮಾನದಂಡಗಳಿಗೆ  ಹೊಂದಿಕೊಳ್ಳುವುದು ಸವಾಲಿನ ಸಂಗತಿಯಾಗಬಹುದು.

▪️ಸಾರ್ವಜನಿಕ ಸೇವೆಯ ರಾಜಕೀಕರಣದ ಅಪಾಯ: 

ಅಧಿಕಾರದಲ್ಲಿರುವ ಪಕ್ಷವು ತಮ್ಮ ರಾಜಕೀಯ ಸಿದ್ಧಾಂತಗಳೊಂದಿಗೆ ಹೊಂದಿಕೊಂಡ ವ್ಯಕ್ತಿಗಳನ್ನು ಸೇರಿಸಿಕೊಳ್ಳಲು ಲ್ಯಾಟರಲ್ ಎಂಟ್ರಿ ಅವಕಾಶ ನೀಡಬಹುದು ಎಂಬ ಕಳವಳವಿದೆ. ಇದು ನಾಗರಿಕ ಸೇವೆಗಳ ರಾಜಕೀಯ ತಟಸ್ಥತೆಗೆ ಧಕ್ಕೆ ತರುತ್ತದೆ.

▪️ಉಪಸಂಹಾರ: 

ನಾಗರಿಕ ಸೇವೆಗಳಲ್ಲಿ ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯು ವಿಶೇಷ ಜ್ಞಾನ ಮತ್ತು ಕೌಶಲಗಳೊಂದಿಗೆ ಅಧಿಕಾರಶಾಹಿಯನ್ನು ಪುನರುಜ್ಜಿವನಗೊಳಿಸುವ ಉದ್ದೇಶ ಹೊಂದಿದೆ. ಆದರೂ, ಅಂತಹ ನೇಮಕಾತಿಗಳನ್ನು ಪಾರದರ್ಶಕವಾಗಿ ಮತ್ತು ಅರ್ಹತೆಯ ಆಧಾರದ ಮೇಲೆ ಮಾಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಸಾಂಪ್ರದಾಯಿಕ ಶಾಶ್ವತ ನಾಗರಿಕ ಸೇವಕರೊಂದಿಗೆ ಬಾಹ್ಯ ಪ್ರತಿಭೆಗಳ ಒಳಸೇರಿಸುವಿಕೆಯನ್ನು ಸಮತೋಲನಗೊಳಿಸುವುದರಿಂದ ಆಧುನಿಕ ಆಡಳಿತದ ಸಂಕೀರ್ಣ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರುವ ಹೆಚ್ಚು ಕ್ರಿಯಾತ್ಮಕ ಮತ್ತು ಪರಿಣಾಮಕಾರಿ ನಾಗರಿಕ ಸೇವಾ ವರ್ಗವನ್ನು ಸಜ್ಜುಗೊಳಿಸಬಹುದು.

ಕೃಪೆ: ಐ.ಜಿ. ಚೌಗಲಾ, 
ಲೇಖಕರು, ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರು

logoblog

Thanks for reading ESSAY-39 ಲ್ಯಾಟರಲ್ ಎಂಟ್ರಿಯ ಸಾಧಕ-ಬಾಧಕಗಳು

Previous
« Prev Post