2025-26ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ) ಸದಸ್ಯರ ಸಭೆ ನಡೆಸುವ ಬಗ್ಗೆ ಅನುದಾನ ಬಿಡುಗಡೆ ಮತ್ತು ಮಾರ್ಗಸೂಚಿ ಪ್ರಕಟ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನಲ್ಲಿ AWP&B ಯಲ್ಲಿ ಪ್ರಾಥಮಿಕ ಶಾಲೆ-40,480 ಹಾಗೂ ಪ್ರೌಢಶಾಲೆ-5129 ಒಟ್ಟು 45609 ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಸಭೆ ನಡೆಸಲು ಹಾಗೂ ದಾಖಲೀಕರಣಕ್ಕಾಗಿ ಪ್ರತಿ ಶಾಲೆಗೆ ರೂ.3000/- ದಂತೆ ಒಟ್ಟು ರೂ.1368.27 ಲಕ್ಷಗಳು ಅನುದಾನ ಅನುಮೋದನೆಯಾಗಿರುತ್ತದೆ.
ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿರುವ ಎಸ್.ಡಿ.ಎಂ.ಸಿ ಸಮಿತಿಗಳ ಸದಸ್ಯರುಗಳಿಗೆ 2025-26 ಸಾಲಿನಲ್ಲಿ ಒಟ್ಟು 4 ಸಭೆಗಳನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ. ಸದರಿ ಅನುದಾನದಲ್ಲಿ ಮೊದಲನೇ ಕಂತಿನಲ್ಲಿ ಪ್ರತಿ ಸಭೆಗೆ ರೂ.500/-ಗಳಂತೆ ಒಟ್ಟು 2 ಸಭೆಗಳಿಗೆ ಒಟ್ಟು ರೂ.1000/- ಗಳನ್ನು ಎಲ್ಲಾ 45609 ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ. (ಅನುದಾನವನ್ನು 2023-24 ನೇ ಸಾಲಿನ SATS ಮಾಹಿತಿಯ ಮೇರೆಗೆ SDMC ಹೊಂದಿರುವ ಶಾಲೆಗಳಿಗೆ ಮಾತ್ರ ಬಿಡುಗಡೆಗೊಳಿಸಲಾಗಿದೆ) ಮೊದಲನೇ ಹಂತದ ಸಭೆಗಳಲ್ಲಿ ಎಸ್.ಡಿ.ಎಂ.ಸಿ ಸದಸ್ಯರಿಗೆ ವೇಳಾಪಟ್ಟಿಯಲ್ಲಿ ನೀಡಲಾಗಿರುವ ವಿಷಯಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸಬೇಕಾಗಿರುತ್ತದೆ ಹಾಗೂ ಮಾಡಲಾಗಿರುವ ಸಭೆಯ ಪೋಟೋ ಮತ್ತು ವರದಿಯನ್ನು ssksdmc@gmail.com ಗೆ ಕಳುಹಿಸುವುದು.
ಮೇಲ್ಕಂಡ ಅನುದಾನವನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ component 2.3.1.1 ಹಾಗೂ ಸರ್ಕಾರಿ ಪ್ರೌಢ ಶಾಲೆಗಳಿಗೆ component 2.1.1.1 PAB ಅನುಮೋದಿತ ಚಟುವಟಿಕೆ ಅಡಿಯಲ್ಲಿ ಅನುಮೋದಿಸಲಾಗಿರುತ್ತದೆ. ಶಾಲೆಗಳಲ್ಲಿ ವೆಚ್ಚವನ್ನು, ಭರಿಸಿಕೊಂಡು, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಬಗ್ಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಖಾತ್ರಿವಡಿಸಿಕೊಳ್ಳುವುದು. ಸಂಬಂಧಪಟ್ಟ ಶಾಲೆಗಳಿಂದ ಉಪಯೋಗಿತ ಪ್ರಮಾಣ ಪತ್ರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರು ಪಡೆದು ಕ್ರೋಡೀಕರಿಸುವುದು.
ಕ್ರೋಢೀಕರಿಸಿದ ಉಪಯೋಗಿತ ಪ್ರಮಾಣ ಪತ್ರವನ್ನು ಉಪನಿರ್ದೇಶಕರು (ಆಡಳಿತ). ರವರಿಗೆ ಸಲ್ಲಿಸುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಕ್ರೋಢೀಕರಿಸಿದ ದೃಢೀಕೃತ ಉಪಯೋಗಿತ ಪ್ರಮಾಣ ಪತ್ರವನ್ನು ಪಡೆದು ಉಪನಿರ್ದೇಶಕರು (ಆಡಳಿತ) ರವರು ನೀಡಲಾದ ನಮೂನೆಯಲ್ಲಿ ಭರ್ತಿ ಮಾಡಿ ದೃಢೀಕರಿಸಿ ದಿನಾಂಕ: 30.11.2025 ರೊಳಗೆ ರಾಜ್ಯ ಕಚೇರಿಯ ಇ-ಮೇಲ್ ವಿಳಾಸ ssksdmc@gmail.comಗೆ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. (ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ) ಸಭೆಯ ಉದ್ದೇಶಗಳು ಬಹುಮುಖ ಮತ್ತು ಶಿಕ್ಷಣ ಕ್ಷೇತ್ರದ ಸಮುದಾಯ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖವಾಗಿವೆ.
ಉದ್ದೇಶಗಳು:-
▪️ಶಾಲೆಯ ಉತ್ತಮ ನಿರ್ವಹಣೆ, ಶೈಕ್ಷಣಿಕ ಮತ್ತು ಶಾಲಾ ಅಭಿವೃದ್ಧಿಗಾಗಿ ಸಮುದಾಯದ ಮಾಲೀಕತ್ವವನ್ನು ಖಚಿತಪಡಿಸುವುದು.
▪️ಶಾಲೆಯ ಅಭಿವೃದ್ಧಿ ಯೋಜನೆಗಳ ಸಿದ್ಧತೆ ಮತ್ತು ಯಶಸ್ವಿ ಅನುಷ್ಠಾನಕ್ಕಾಗಿ ಪಾಲುದಾರಿಕೆಯನ್ನು ಹೆಚ್ಚಿಸುವುದು.
▪️ಪೋಷಕರು, ಶಿಕ್ಷಕರು ಮತ್ತು ಸಮುದಾಯದ ಪ್ರತಿನಿಧಿಗಳು ಸೇರಿ ವಿದ್ಯಾರ್ಥಿಗಳ ಕಲಿಕೆ ಮತ್ತು ಸುಧಾರಣೆಯ ಕುರಿತಾದ ನಿರಂತರ ಚರ್ಚೆ ನಡೆಸುವುದು.
▪️ಶಾಲೆಗೆ ಸಂಬಂಧಪಟ್ಟ ಆರ್ಥಿಕ, ಭೌತಿಕ ಮತ್ತು ಮಾನವ ಸಂಪನ್ಮೂಲಗಳ ಬಳಕೆ ಮತ್ತು ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವುದು.
▪️ಮಕ್ಕಳ ರಕ್ಷಣೆ, ಆರೋಗ್ಯ ಸಮುದಾಯ ಭಾಗವಹಿಸುವಿಕೆ ಮತ್ತು ಶಾಲಾ ಪರಿಸರ ಸುಧಾರಣೆಗಾಗಿ ಕ್ರಮ ಕೈಗೊಳ್ಳುವುದು,
▪️ವಿದ್ಯಾರ್ಥಿಗಳ ಹಾಜರಿ, ಶಾಲಾ ಸೌಲಭ್ಯಗಳು ಮತ್ತು ಶಿಕ್ಷಣದ ಗುಣಮಟ್ಟದ ಮೇಲೆ ಗಮನವಿಡುವುದು.
ಸಭೆಯ ಅನುಷ್ಠಾನದ ಹಂತಗಳು :-
ಸಭೆಯನ್ನು ಹಮ್ಮಿಕೊಳ್ಳುವ ಸ್ಥಳ : ಒಟ್ಟು 02 ಸಭೆಗಳನ್ನು ಶಾಲಾ ಹಂತದಲ್ಲಿ ಹಮ್ಮಿಕೊಳ್ಳುವುದು
ಅನುದಾನ :
ಒಟ್ಟು ಅನುದಾನ ರೂ. 1000/- ಗಳು ಮಾತ್ರ (ಒಂದು ಸಾವಿರ ರೂಪಾಯಿಗಳು) ಪ್ರತಿ ಸಭೆಗೆ ರೂ. 500/- ಗಳನ್ನು (ಐದುನೂರು ರೂಪಾಯಿಗಳು ಮಾತ್ರ) ಭರಿಸುವುದು. ಸದರಿ ಮೊತ್ತದಲ್ಲಿ ಸಭೆಗಳಿಗೆ ಅಗತ್ಯವಾದ ಸಾಹಿತ್ಯದ ಭಾಗಗಳನ್ನು ಎಸ್.ಡಿ.ಎಂ.ಸಿ ಸದಸ್ಯರಿಗೆ ನೀಡಲು ಜೆರಾಕ್ಸ್ ಮಾಡಿಸಲು ಹಾಗೂ ಟೀ, ಕಾಫಿ /ಸ್ನಾಕ್ಸ್ ವ್ಯವಸ್ಥೆ ಮಾಡಲು ಬಳಸಿಕೊಳ್ಳುವುದು. ಸಭೆಗಳಲ್ಲಿ ಭಾಗವಹಿಸುವ ಎಸ್.ಡಿ.ಎಂ.ಸಿ. ಸಮಿತಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ವ್ಯವಸ್ಥೆ ಮಾಡುವುದು. ಎಸ್.ಡಿ.ಎಂ.ಸಿಯ ಎಲ್ಲಾ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವುದು.
ವಿಶೇಷ ಸೂಚನೆ:- ವೇಳಾ ಪಟ್ಟಿಯಂತೆ ಕಾರ್ಯಕ್ರಮವನ್ನು ಲಭ್ಯವಿರುವ ಅನುದಾನದಲ್ಲಿ ನಡೆಸುವುದು. ಸದರಿ ಕಾರ್ಯಕ್ರಮದ ಅನುದಾನ ಬಿಡುಗಡೆಯಾದ ನಂತರ ಮರುಹೊಂದಾಣಿಕ ಮಾಡಿಕೊಳ್ಳಲು ಸೂಚಿದೆ.
ಎಸ್.ಡಿ.ಎಂ.ಸಿ ಸಭೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವಾಗ ವಿವಿಧ ಹಂತದ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳು.
1. ಮುಖ್ಯ ಶಿಕ್ಷಕರ ಜವಾಬ್ದಾರಿಗಳು (ಅನುದಾನ ಬಿಡುಗಡೆ ಮತ್ತು ಬಳಕೆ )
▪️2025-26 ನೇ ಸಾಲಿನ ಪಿ.ಎ.ಬಿ ಅನುಮೋದನೆಯಂತೆ ಶಾಲಾ ಮುಖ್ಯ ಶಿಕ್ಷಕರು ಎಸ್.ಡಿ.ಎಂ.ಸಿ ಸದಸ್ಯರುಗಳಿಗೆ ಮೊದಲ 2 ಸಭೆಗಳನ್ನು ಸುತ್ತೋಲೆಯನ್ವಯ ನಿರ್ವಹಿಸುವುದು.
▪️2 ತರಬೇತಿಗಳನ್ನು ಅಕ್ಟೋಬರ್ ಮತ್ತು ನವೆಂಬರ್ 2025 ರ ಮಾಹೆಯಲ್ಲಿ ಪೂರ್ಣಗೊಳಿಸುವುದು ಹಾಗೂ ವ್ಯವಸ್ಥಿತವಾಗಿ ನಿರ್ವಹಿಸುವುದು ಮುಖ್ಯ ಶಿಕ್ಷಕರ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ.
▪️ಶಾಲೆಯಲ್ಲಿ ಮುಖ್ಯ ಶಿಕ್ಷಕರು ಶಿಕ್ಷಕರು. ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಪೂರ್ವಾಭಾವಿ ಸಭೆಯನ್ನು ಕರೆದು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು.
▪️ಶಾಲೆಯಲ್ಲಿ ಒಂದು ವಾರದ ಮೊದಲೇ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸೂಚನೆ ನೀಡಿ, ಎಲ್ಲಾ ಸದಸ್ಯರು ಹಾಗೂ ಪೋಷಕರು ಭಾಗವಹಿಸುವಂತೆ ಖಾತ್ರಿಪಡಿಸಿಕೊಳ್ಳುವುದು.
▪️ವೇಳಾಪಟ್ಟಿಗೆ ಅನುಗುಣವಾಗಿ ಸಭೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು.
▪️ಸಭೆಗೆ ಸಂಬಂಧಿಸಿದ ಪೂರ್ವಸಿದ್ಧತೆ, ಕಾರ್ಯಗಾರದ ದಿನದಂದು ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆ ಹಾಗೂ ಇತರೆ ಮೂಲ ಭೂತ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು,
▪️ಪ್ರತೀ ಸಭೆಯು ಮುಗಿದ ನಂತರ ಸಭೆಯ ಸಂಕಿಪ್ತ ವರದಿ ಮತ್ತು ಉತ್ತಮ ಗುಣಮಟ್ಟದ ಫೋಟೋವನ್ನು ರಾಜ್ಯಕಚೇರಿಯ ಇ-ಮೇಲ್ ವಿಳಾಸ ssksdmc@gmail.com ಗೆ ಅಪ್‌ಲೋಡ್ ಮಾಡುವುದು.
2. ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಗಳು (ತಾಲ್ಲೂಕು ಹಂತ-ಪ್ರಾಥಮಿಕ ಶಾಲೆಗಳಿಗೆ ಅನುದಾನ ಬಿಡುಗಡೆ)
▪️2025-26ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನಗಳು ಅದೇ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದು ಖಾತ್ರಿಗೊಳಿಕೊಳ್ಳುವುದು.
▪️ಸುತ್ತೋಲೆಯಲ್ಲಿ ತಿಳಿಸಲಾಗಿರುವ ದಿನಾಂಕಗಳಂದು ಶಾಲೆಗಳಲ್ಲಿ ನಡೆಸಲಾಗುವ ಎಸ್.ಡಿ.ಎಂ.ಸಿ. ಸಭೆಗಳಲ್ಲಿ ಖುದ್ದು ಭಾಗವಹಿಸುವುದು ಹಾಗೂ ಸಂಬಂಧಿಸಿದ ಬಿ.ಆರ್.ಸಿ ಮತ್ತು ಸಿ.ಆರ್.ಸಿ ಗಳಿಗೆ ಸಭೆಯಲ್ಲಿ ಭಾಗವಹಿಸುವಂತೆ ನಿರ್ದೇಶನ ನೀಡುವುದು.
▪️ಶಾಲೆಗಳಲ್ಲಿ ನಡೆಸಲಾದ ಸಭೆಗಳ ದಾಖಲೀಕರಣವನ್ನು (ವರದಿ ಮತ್ತು ಪೋಟೋ, ವಿಡಿಯೋ ತುಣಕುಗಳು) ಶಾಲೆಗಳಿಂದ ಪಡೆದು ಕಸ್ಟರ್‌ವಾರು ಕ್ರೋಢಿಕರಣ ಮಾಡಿ ssksdmc@gmail.com) ಕಳುಹಿಸಲು ಸೂಚಿಸಿದೆ.
3. ಉಪನಿರ್ದೇಶಕರ ಜವಾಬ್ದಾರಿಗಳು(ಜಿಲ್ಲಾ ಹಂತ-ಅನುದಾನ ಬಿಡುಗಡೆ)
▪️ಮುಖ್ಯ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿರುವ ಸೂಚನೆಗಳ ಅನುಪಾಲನೆ ಮಾಡುವುದು.
▪️ಸುತ್ತೋಲೆಯಲ್ಲಿ ತಿಳಿಸಲಾಗಿರುವ ದಿನಾಂಕಂದು ಒಂದು ಶಾಲೆಯಲ್ಲಿ ಎಸ್.ಡಿ.ಎಂ.ಸಿ ಸಭೆಯಲ್ಲಿ ಖುದ್ದು ಭಾಗವಹಿಸುವುದು ಹಾಗೂ ಡಿ.ವೈ.ಪಿ.ಸಿ ಮತ್ತು ಎ.ಪಿ.ಸಿ.ಗಳು ಭಾಗವಹಿಸುವಂತೆ ನಿರ್ದೇಶನ ನೀಡುವುದು.
▪️2025-26 ನೇ ಶೈಕ್ಷಣಿಕ ವರ್ಷದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಬಿಡುಗಡೆಗೊಳಿಸುವ ಅನುದಾನಗಳನ್ನು ತಿಳಿಸಲಾಗಿರುವ ಅವಧಿಯಲ್ಲಿ ಮತ್ತು ಅದೇ ಸಾಲಿನಲ್ಲಿ ಖರ್ಚು ಮಾಡಲು ಕ್ರಮ ವಹಿಸುವುದು ಹಾಗೂ ಅನುಪಾಲನೆ ಮಾಡುವುದು.
ಮೇಲೆ ತಿಳಿಸಲಾಗಿರುವ ಎಲ್ಲಾ ಜವಾಬ್ದಾರಿಗಳನ್ನು, ನಿರ್ದೇಶನ ನೀಡಿರುವ ಅಧಿಕಾರಿಗಳು ಸಕಾಲದಲ್ಲಿ ನಿರ್ವಹಿಸಲು ತಿಳಿಸಿದೆ. ವಿಳಂಬ ನೀತಿ ಅನುಸರಿಸಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸುವುದಲ್ಲದೇ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದೆಂದು ತಿಳಿಸಿದೆ.